BREAKING NEWS

ವಿವಾಹ ನೋಂದಣಿ ವೇಳೆ ವಧು-ವರರ ಧರ್ಮ ಕೇಳಬೇಡಿ: ಕೇರಳ ಸರ್ಕಾರ ಆದೇಶ

ತಿರುವನಂತಪುರಂ (ಕೇರಳ): ವಿವಾಹ ನೋಂದಣಿ ವೇಳೆ ವಧು ಹಾಗೂ ವರನ ಧರ್ಮವನ್ನು ಕೇಳಬಾರದು ಎಂದು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಕೇರಳ ರಾಜ್ಯ ಸರ್ಕಾರ ಆದೇಶ ನೀಡಿದೆ. ಕೇರಳ ರಾಜ್ಯದ ಎಲ್ಲ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳೂ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಕೇರಳದ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರ ಹೇಳಿದೆ.

ಧರ್ಮದ ಕಾರಣಕ್ಕಾಗಿ ವಿವಾಹ ನೋಂದಣಿ ರದ್ದಾಗಬಾರದು ಎಂದು ಸಿಎಂ ಪಿಣರಾಯಿ ವಿಜಯನ್ ಸರ್ಕಾರ ಹೇಳಿದೆ. ಕೇರಳ ರಾಜ್ಯ ಸರ್ಕಾರದ ಸ್ಥಳೀಯ ಆಡಳಿತ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.

ಈ ರೀತಿಯ ಆದೇಶಕ್ಕೆ ಕಾರಣ ಏನು?

ಕೇರಳ ರಾಜ್ಯ ಸರ್ಕಾರದ ವಿರುದ್ಧ ಲಲನ್ ಪಿ. ಆರ್. ಹಾಗೂ ಆಯೆಷಾ ಎಂಬುವರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಬೇರೆ ಬೇರೆ ಧಾರ್ಮಿಕ ನಂಬಿಕೆ ಹೊಂದಿದ್ದ ಜೋಡಿಗಳ ವಿವಾಹಕ್ಕೆ ಕೊಚ್ಚಿನ್ ಸಹಕಾರ ಸಂಸ್ಥೆ ನಿರಾಕರಿಸಿತ್ತು. ವಿವಾಹ ನೋಂದಣಿಯನ್ನೂ ನಿರ್ವಹಿಸುವ ಈ ಸಂಸ್ಥೆ, ಜೋಡಿಗಳು ಅನ್ಯ ಧರ್ಮೀಯರಾದ ಕಾರಣ ವಿವಾಹಕ್ಕೆ ಸಮ್ಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನವ ಜೋಡಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಕೇರಳ ಹೈಕೋರ್ಟ್‌ ಕೂಡಾ ಜೋಡಿಗಳ ಪರವಾಗಿಯೇ ತೀರ್ಪು ನೀಡಿತ್ತು.

ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿದ್ದು, ರಾಜ್ಯಾದ್ಯಂತ ಇರುವ ವಿವಾಹ ನೋಂದಣಿ ಕಚೇರಿಗಳು, ಜೋಡಿಗಳ ವಿವಾಹ ನೋಂದಣಿ ಮಾಡುವ ವೇಳೆ ಅವರ ಧಾರ್ಮಿಕ ನಂಬಿಕೆಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಕೇವಲ ವಧು ವರರು ಮಾತ್ರವಲ್ಲ, ಅವರ ಪೋಷಕರ ಧರ್ಮವನ್ನೂ ಪರಿಶೀಲಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಅರ್ಹ ಜೋಡಿಗಳ ವಿವಾಹಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಎಲ್ಲಕ್ಕಿಂತಾ ಮುಖ್ಯವಾಗಿ ಜೋಡಿಗಳ ವಯಸ್ಸು ಹಾಗೂ ಸಾಕ್ಷಿಗಳ ಸಮ್ಮತಿ ಇದ್ದರೆ ಸಾಕು ಎಂದು ಸರ್ಕಾರ ಹೇಳಿದೆ.

ವಿವಾಹ ನೋಂದಣಿ ಮಾಡುವ ಸ್ಥಳೀಯ ಸಂಸ್ಥೆಗಳು, ರಿಜಿಸ್ಟ್ರಾರ್‌ ಜನರಲ್‌ಗಳು ಹಾಗೂ ಮುಖ್ಯ ರಿಜಿಸ್ಟ್ರಾರ್ ಜನರಲ್‌ಗಳೂ ಕೂಡಾ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಕೇರಳ ರಾಜ್ಯ ಸರ್ಕಾರದ ಸುತ್ತೋಲೆ ಹೇಳಿದೆ. ಈ ನಿಯಮಗಳನ್ನು ಯಾರಾದರೂ ಉಲ್ಲಂಘಿಸಿದರೆ ಅವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳೋದಾಗಿ ಸರ್ಕಾರ ಹೇಳಿದೆ.

ಹಾಗೆ ನೋಡಿದ್ರೆ ಕೇರಳ ರಾಜ್ಯ ಸರ್ಕಾರ ಈ ಹಿಂದೆಯೇ ವಧು ಹಾಗೂ ವರರ ಧರ್ಮ ಕೇಳಬಾರದು ಎಂದು ಕಟ್ಟುನಿಟ್ಟಾಗಿ ಹೇಳಿತ್ತು. ಆದ್ರೆ, ಕೇರಳ ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರಲಿಲ್ಲ. ವಿವಾಹ ನೋಂದಣಿ ವೇಳೆ ಮೊದಲಿಗೆ ಜಾತಿ ಹಾಗೂ ಧರ್ಮಗಳನ್ನು ಪರಿಶೀಲನೆ ಮಾಡುವ ಪರಿಪಾಠ ನಡೆದು ಬಂದಿತ್ತು.

ಕೇರಳ ರಾಜ್ಯದಲ್ಲಿ 2008ರಲ್ಲಿ ವಿವಾಹ ನೋಂದಣಿ ಕಾನೂನು ರೂಪಿಸಲಾಗಿತ್ತು. ವಿವಾಹ ನೋಂದಣಿ ಪ್ರಕ್ರಿಯೆ ವೇಳೆ ಯಾವುದೇ ಜಾತಿ ಹಾಗೂ ಧರ್ಮವನ್ನು ನೋಡದೆ ನೆರವೇರಿಸಬೇಕು ಎಂದು ಹೇಳಲಾಗಿತ್ತು. ಆದರೆ, ಲಲನ್ ಹಾಗೂ ಆಯೆಷಾ ಅವರ ಪ್ರಕರಣದಲ್ಲಿ 2008ರ ವಿವಾಹ ನೋಂದಣಿ ಕಾನೂನು ಪಾಲನೆ ಆಗಿಲ್ಲ ಎಂದು ಕೇರಳ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಪಿ. ವಿ. ಕುನ್ಹಿಕೃಷ್ಣನ್ ಅವರು ಅಭಿಪ್ರಾಯಪಟ್ಟಿದ್ದರು. ಈ ಕಾಯ್ದೆಯು ವಿವಾಹ ನೋಂದಣಿ ಮಾಡಿಸಲು ಅಷ್ಟೇ ಅಲ್ಲ, ಮಹಿಳೆ ಹಾಗೂ ಅವರಿಗೆ ಜನಿಸುವ ಮಕ್ಕಳ ಹಕ್ಕುಗಳ ರಕ್ಷಣೆಗೂ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಅಂತಿಮವಾಗಿ ತನ್ನ ಆದೇಶದಲ್ಲಿ ಕೇರಳ ಹೈಕೋರ್ಟ್‌, 2008ರ ಕೇರಳ ರಾಜ್ಯ ಸರ್ಕಾರದ ವಿವಾಹ ನೋಂದಣಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚನೆ ನೀಡಿತ್ತು. ಅಧಿಕಾರಿಗಳು ವಿವಾಹ ನೋಂದಣಿ ವೇಳೆ ಸುಖಾಸುಮ್ಮನೆ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ, ಈ ಸಂಬಂಧ ಸ್ಪಷ್ಟ ಸೂಚನೆಗಳನ್ನು ನೀಡುವಂತೆ ಕೇರಳ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದು, ಕಟ್ಟುನಿಟ್ಟಾಗಿ ಸರ್ಕಾರದ ಆದೇಶ ಪಾಲನೆ ಮಾಡುವಂತೆ ಹೇಳಿದ್ದಾರೆ.
andolanait

Recent Posts

ವರ್ಷದ ಕೊನೆಯ ಮನ್‌ ಕಿ ಬಾತ್‌ನಲ್ಲಿ 2025ರ ಭಾರತದ ಸಾಧನೆ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ಮೋದಿ ಅವರು ಇಂದು ತಮ್ಮ 129ನೇ ಮನ್‌ ಕಿ ಬಾತ್‌ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. 2025ರಲ್ಲಿ ಭಾರತದ…

17 mins ago

ಜಲಾಂತರಗಾಮಿ ನೌಕೆಯಲ್ಲಿ ಪ್ರಯಾಣಿಸಿ ಹೊಸ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕಾರವಾರ: ದೇಶದ ಪ್ರಥಮ ಪ್ರಜೆಯಾಗಿರುವ ಸೇನಾ ಪಡೆಗಳ ಮಹಾದಂಡ ನಾಯಕಿ ರಾಷ್ಟ್ರಪತಿ ದ್ರೌಪದ ಮುರ್ಮು ಅವರು ಇಂದು ಜಲಾಂತರಗಾಮಿ ನೌಕೆಯಲ್ಲಿ…

43 mins ago

800 ಕಿ.ಮೀ ಪಾದಯಾತ್ರೆ ಮೂಲಕ ಅಯ್ಯಪ್ಪನ ದರ್ಶನ ಪಡೆಯುವುದಕ್ಕೆ ಹೊರಟ ಭಕ್ತರು

ಮೈಸೂರು: ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕದ ಕೇರಳ ರಾಜ್ಯದಲ್ಲಿ ಇದ್ದರೂ ಅಯ್ಯಪ್ಪನಿಗೆ ಹೆಚ್ಚಿನ ಭಕ್ತರು ಇರುವುದು ನಮ್ಮ ಕರ್ನಾಟಕದಲ್ಲಿಯೇ ಪ್ರತಿ…

46 mins ago

ಚಾಮರಾಜನಗರ| ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ

ಚಾಮರಾಜನಗರ: ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹಲವು ಗ್ರಾಮಗಳಲ್ಲಿ…

58 mins ago

ಸಿಎಂ ಸಿದ್ದರಾಮಯ್ಯ ತವರಲ್ಲಿ ದಲಿತ ಸಿಎಂ ಕೂಗು

ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಸಿಎಂ ಮಾಡುವಂತೆ…

2 hours ago

ಎಂಇಎಸ್‌ ನಿಷೇಧಿಸುವಂತೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ಮೈಸೂರು : ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ನಿಷೇಧಿಸಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್ ಪ್ರತಿಭಟನೆ ನಡೆಸಿದರು.…

2 hours ago