ಮೈಸೂರು: ದೊಡ್ಡ ಗಡಿಯಾರದ ಕಾಪರ್ ಗ್ರೌಂಡಿಂಗ್ ರಾಡ್ ಕಳವು

ಮೈಸೂರು: ನಗರದ ಐತಿಹಾಸಿಕ ಸ್ಮಾರಕವಾದ 75 ಅಡಿ ಎತ್ತರದ, 96 ವರ್ಷ ಪುರಾತನವಾದ ದೊಡ್ಡ ಗಡಿಯಾರದ ಕಾಪರ್ ಗ್ರೌಂಡಿಂಗ್ ರಾಡ್ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಸ್ಮಾರಕದ ಸುರಕ್ಷತೆ ಬಗ್ಗೆ ಆತಂಕ ಉಂಟುಮಾಡಿದೆ.

ಪುರಭವನದ ಎದುರಿರುವ ಈ ಕಟ್ಟಡದ ಕೆಳಭಾಗದಲ್ಲಿ ಸುಮಾರು 15 ಅಡಿ ಎತ್ತರದ ಲೈಟ್ನಿಂಗ್ ರಾಡ್ ಅನ್ನು ಅಳವಡಿಸಲಾಗಿತ್ತು. ಭಾರೀ ಮಿಂಚು, ಸಿಡಿಲು ಬಡಿದಾಗ ಕಟ್ಟಡಕ್ಕೆ ಅಪಾಯ ಬಾರದಿರಲಿ ಎಂಬ ಕಾರಣಕ್ಕೆ ಈ ರಾಡ್ ಅನ್ನು ಎಲ್ಲ ಪಾರಂಪರಿಕ ಕಟ್ಟಡಗಳಿಗೂ ಅಳವಡಿಸಿರಲಾಗುತ್ತದೆ. ಈಗ ಈ ರಾಡ್‌ಗಳು ಕಳುವಾಗಿರುವುದು ಆತಂಕ ಸೃಷ್ಟಿಸಿದೆ. ಅಲ್ಲದೆ ದೊಡ್ಡ ಗಡಿಯಾರದ ಕೆಳಭಾಗದಲ್ಲಿ ಇಲಿ, ಹೆಗ್ಗಣಗಳು ಭೂಮಿಯನ್ನು ಕೊರೆದು ದೊಡ್ಡ ಬಿಲ ಸೃಷ್ಟಿಸಿದ್ದು, ಇದರಿಂದ ಅಪಾಯ ಆಗುವ ಸಾಧ್ಯತೆ ಇದೆ. ಪಾಲಿಕೆ ದೊಡ್ಡ ಗಡಿಯಾರಕ್ಕೆ ಸುರಕ್ಷತೆ ಒದಗಿಸಬೇಕು ಎಂದು ಇತಿಹಾಸ ತಜ್ಞ ಎನ್.ಎಸ್.ರಂಗರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಬೃಹತ್ ಮಿಂಚು, ಸಿಡಿಲು ಸಂಭವಿಸಿದಾಗ ಅಪ್ಪಳಿಸಿದಾಗ ಈ ರಾಡ್ ಅದನ್ನು ತನ್ನತ್ತ ಆಕರ್ಷಿಸುವುದರಿಂದ ಕಟ್ಟಡಕ್ಕೆ ಆಗುವ ಅಪಾಯ ತಪ್ಪುತ್ತದೆ. ಆದ್ದರಿಂದ ಎಲ್ಲ ಕಟ್ಟಡಗಳಿಗೂ ಈ ರೀತಿಯ ಲೈಟ್ನಿಂಗ್ ರಾಡ್‌ಗಳನ್ನು ಅಳವಡಿಸಿರಲಾಗುತ್ತದೆ. ಅದು ಕಳವಾಗಿರುವುದು ಆತಂಕಕಾರಿ ಸಂಗತಿ. ನಮ್ಮ ತಂಡ ಸ್ಥಳ ಪರಿಶೀಲನೆಗೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂತು. ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ದೊಡ್ಡ ಗಡಿಯಾರದ ಕೆಲವು ಭಾಗಗಳು ಶಿಥಿಲವಾಗಿವೆ. ಅಲ್ಲದೆ ಮಳೆಗಾಲ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಲೈಟ್ನಿಂಗ್ ರಾಡ್ ಕಳವಾಗಿದೆ. ಮಳೆಗಾಲದಲ್ಲಿ ಜೋರು ಗುಡುಗು ಅಥವಾ ಸಿಡಿಲು ಬಡಿದಾಗ ಕಟ್ಟಡಕ್ಕೆ ಅಪಾಯ ಆಗುವ ಸಾಧ್ಯತೆ ಹೆಚ್ಚಾಗಿದೆ. ಆದಷ್ಟು ಶೀಘ್ರವಾಗಿ ಮತ್ತೆ ರಾಡ್ ಅಳವಡಿಸಿ ಕಟ್ಟಡದ ಕೆಳಭಾಗದಲ್ಲಿ ಇಲಿ, ಹೆಗ್ಗಣಗಳು ಕೊರೆದಿರುವ ಸ್ಥಳವನ್ನು ಮುಚ್ಚಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಅನುಮಾನವಿಲ್ಲ.

ʻಈ ಲೈಟ್ನಿಂಗ್ ರಾಡ್‌ಗಳು ಕಳೆದ 2 ವರ್ಷದ ಹಿಂದೆಯೇ ಕಳವಾಗಿದೆ ಎಂದು ಮಾಹಿತಿ ಬಂದಿದೆ. ಇನ್ನು 2-3 ದಿನಗಳಲ್ಲಿ ದುರಸ್ತಿ ಕಾರ್ಯ ನಡೆಸಲಾಗುತ್ತದೆʼ.

– ಗುರುದತ್ತ ಹೆಗಡೆ, ಆಯುಕ್ತರು, ಮೈಸೂರು ಮಹಾನಗರಪಾಲಿಕೆ

× Chat with us