ಪುನೀತ್‌ ರಾಜ್‌ಕುಮಾರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಡಿಕೆಶಿ

ಬೆಂಗಳೂರು: ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ.

ನನ್ನ ನೆರೆಹೊರೆಯವರಾದ, ಸ್ವಂತ ಸಹೋದರನಂತಿದ್ದ ಪುನೀತ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟು ಚಿಕ್ಕವಯಸ್ಸಿನಲ್ಲಿ ಅವರನ್ನು ಕೊಂಡೋಯ್ದ ವಿಧಿ ಬಹಳ ಕ್ರೂರಿ ಎಂದು ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ.

ಪುನೀತ್ ಅವರು ನನಗೆ ಆತ್ಮೀಯರಾಗಿದ್ದರು. ಕುಟುಂಬದ ಸ್ನೇಹಿತರಾಗಿದ್ದರು. ನಮ್ಮಿಬ್ಬರ ಕುಟುಂಬ ಸದಸ್ಯರ ನಡುವೆ ಉತ್ತಮ ಒಡನಾಟವಿತ್ತು ಎಂದು ಸ್ಮರಿಸಿದ್ದಾರೆ.

ನಾವಿಬ್ಬರೂ ಒಟ್ಟಿಗೆ ವಾಕಿಂಗ್ ಮಾಡಿದ್ದೇವೆ. ಜಿಮ್ ಮಾಡಿದ್ದೇವೆ. ಚಿತ್ರರಂಗ ಸೇರಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಶಿಸ್ತುಬದ್ಧ ಜೀವನ, ಕಟ್ಟುನಿಟ್ಟಿನ ವ್ಯಾಯಾಮದ ಮೂಲಕ ಪುನೀತ್ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಫಿಟ್ನೆಸ್ ವಿಚಾರವಾಗಿ ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಅಂತಹವರನ್ನು ಭಗವಂತ ಇಷ್ಟು ಬೇಗ ಕರೆಸಿಕೊಳ್ಳುತ್ತಾನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಶಿವಕುಮಾರ್ ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

6 ತಿಂಗಳ ಮಗುವಾಗಿದ್ದಾಗಿನಿಂದಲೇ (ಪ್ರೇಮದ ಕಾಣಿಕೆ) ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ನಟಿಸಿದ್ದ ಪುನೀತ್, ನಂತರ ವಸಂತಾ ಗೀತಾ, ಚಲಿಸುವ ಮೋಡಗಳು, ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಾಲ ನಟರಾಗಿ ಮನಗೆದ್ದಿದ್ದರು. ಬೆಟ್ಟದ ಹೂವು ಚಿತ್ರದ ನಟನೆಗೆವರಾಷ್ಟ್ರ ಪ್ರಶಸ್ತಿ ಬಂದಿದಗದು ಮಾತ್ರವಲ್ಲದೇ, ತಂದೆಗೆ ತಕ್ಕ ಮಗನಂತೆ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲ ವರ್ಗದ ಜನರ ಅಭಿಮಾನ ಗಳಿಸಿದ ಧ್ರುವ ನಕ್ಷತ್ರ ಪುನೀತ್ ಅವರು. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೆ ಅನ್ಯ ಭಾಷಿಕ ಪ್ರೇಕ್ಷಕರನ್ನು ತಮ್ಮ ಅಭಿಮಾನಿಯಾಗಿ ಮಾಡಿಕೊಂಡಿದ್ದು ಪುನೀತ್ ಅವರಲ್ಲಿದ್ದ ಕಲಾ ಶಕ್ತಿಗೆ ಸಾಕ್ಷಿ.

ನಾನು ರಾಜ್ ಕುಮಾರ್ ಚಿತ್ರಗಳನ್ನು ನೋಡುತ್ತಾ ಬೆಳೆದವನು. ಅದೇ ರೀತಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಅವರ ಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ. ಒಬ್ಬರಿಗಿಂತ ಮತ್ತೊಬ್ಬರು ಮಿಗಿಲಾದ ನಟರು ಎಂದು ಮೆಲುಕು ಹಾಕಿದರು.

ಪುನೀತ್ ಅವರ ಅಗಲಿಕೆ ಕೇವಲ ಚಿತ್ರರಂಗಕ್ಕಷ್ಟೇ ಅಲ್ಲ, ಇಡೀ ನಾಡಿಗೆ ತುಂಬಲಾರದ ನಷ್ಟ’ ಎಂದರು.

ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗಷ್ಟೇ ಅಲ್ಲ, ಇಡೀ ನಾಡಿಗೇ ಆ ಭಗವಂತ ನೀಡಲಿ ಎಂದು ಶಿವಕುಮಾರ್ ಅವರು ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

× Chat with us