ಕೋವಿಡ್‌ ನಿಭಾಯಿಸುವಲ್ಲಿ ಜಿಲ್ಲಾಡಳಿತ ಸೋತಿದೆ: ಡಿಸಿ ವಿರುದ್ಧ ಸಾರಾ ಕಿಡಿ

ಮೈಸೂರು: ಕೋವಿಡ್‌ ಎರಡನೇ ಅಲೆ ನಿಭಾಯಿಸುವಲ್ಲಿ ಜಿಲ್ಲಾಡಳಿತ ಸೋತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್‌ ಕಿಡಿಕಾರಿದರು.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದ ತಪ್ಪಿನಿಂದಲೇ 3 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವುದರಲ್ಲೂ ನಿಯಮ ಪಾಲಿಸುತ್ತಿಲ್ಲ. ಮತ್ತೆ ಹೇಗೆ ನಿಯಂತ್ರಣಕ್ಕೆ ಬರಲಿದೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರತಿ ವಲಯದಲ್ಲೂ ಕೋವಿಡ್ ಕೇರ್ ತೆರೆಯಬೇಕು ಎನ್ನುತ್ತಾರೆ, ಅದಕ್ಕೆ ಬೇಕಿರುವ ವೈದ್ಯರನ್ನು ಎಲ್ಲಿಂದ ತರುತ್ತಾರೆ? ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಹಿಂದಿನ ಡಿಸಿ ಅಭಿರಾಂ ಜಿ ಶಂಕರ್ ಅವರು ಒಬ್ಬ ಡಿ ಗ್ರೂಪ್ ನೌಕರ ಹೇಳಿದ್ದನ್ನೂ ಆಲಿಸುತ್ತಿದ್ದರು. ಜಿಲ್ಲೆಗೆ ಅಭಿರಾಮ್ ಜಿ ಶಂಕರ್, ಹರ್ಷಗುಪ್ತ, ಶಿಖಾರಂತಹ ಅಧಿಕಾರಿಗಳು ಬೇಕು. ಕೋವಿಡ್ ಮೊದಲ ಅಲೆಯಲ್ಲಿ ಡಿಸಿಯಾಗಿದ್ದ ಅಭಿರಾಮ್ ಅವರು ಜಿಲ್ಲೆಯನ್ನು ಯಶಸ್ವಿಯಾಗಿ ನಡೆಸಿದರು ಎಂದು ಹೊಗಳಿದರು.

ಕೋವಿಡ್‌ ಸಮಸ್ಯೆಗಳನ್ನು ಅರಿತೇ ಸಾ.ರಾ ಬಳಗದಿಂದ ಕೋವಿಡ್ ಕೇರ್ ಕೇಂದ್ರ ತೆರೆದು, ಮೂವರು ವೈದ್ಯರನ್ನು ನಾವೇ ನೇಮಿಸಿದ್ದೇವೆ. ವೈದ್ಯರಿಗೆ ತಲಾ 1 ಲಕ್ಷ ರೂ. ನೀಡುತ್ತಿದ್ದೇವೆ. 200 ಹಾಸಿಗೆ ವ್ಯವಸ್ಥೆ ಇರುವ ಅಸ್ಪತ್ರೆಯನ್ನು ಸಾರಾ ಸ್ನೇಹಬಳಗದಿಂದ ಮಾಡಲಿದ್ದೇವೆ. ಕೆ.ಆರ್.ನಗರದಲ್ಲಿ ಎಸಿ ಫ್ಯಾನ್, 200 ಹಾಸಿಗೆ ವ್ಯವಸ್ಥೆ ಇರುವ ಆಸ್ಪತ್ರೆ ನಿರ್ಮಿಸಿ ತಾಲ್ಲೂಕು ಆಡಳಿತಕ್ಕೆ ಒಪ್ಪಿಸುತ್ತೇವೆ ಎಂದು ತಿಳಿಸಿದರು.

× Chat with us