ಎನ್‌ಟಿಎಂ ಶಾಲೆಯನ್ನು ಮೈಸೂರು ಮಾತ್ರವಲ್ಲ, ಸಂವೇದನಾಶೀಲ ಭಾರತವೇ ಕಾಪಾಡಿಕೊಳ್ಳಬೇಕಿದೆ: ದೇಮ

ಮೈಸೂರು: ಎನ್‌ಟಿಎಂ ಶಾಲೆಯ ನೆಲವನ್ನು ಮೈಸೂರು ಮಾತ್ರವಲ್ಲ ಇಡೀ ಸಂವೇದನಾ ಶೀಲಾ ಭಾರತವೇ ಕಾಪಾಡಿಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.

ಒಡನಾಡಿ ಸೇವಾ ಸಂಸ್ಥೆಯ ನೇತೃತ್ವದಲ್ಲಿ ಗುರುವಾರ ನಡೆದ ಎನ್‌ಟಿಎಂ ಶಾಲೆಯ ಉಳಿಸಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎನ್‌ಟಿಎಂ ಶಾಲೆಯ ಈ ನೆಲಕ್ಕೆ ಒಂದು ನೆನಪು, ಆಶಯ ಹಾಗೂ ಜೀವ ಚೈತನ್ಯವಿದೆ. ಇದಕ್ಕೆ ಬೆಲೆ ಕಟ್ಟಲಾಗದು ಎಂದು ತಿಳಿಸಿದರು.

೧೪೦ ವರ್ಷಗಳ ಹಿಂದೆಯೇ ಭಾರತೀಯ ಸಮಾಜದಲ್ಲಿ ಅ ಆ ಇ ಈ ಸೋಕದ ಹೆಣ್ಣು ಮಕ್ಕಳಿಗಾಗಿಯೇ ಒಂದು ಶಾಲೆ ಆರಂಭಿಸುವುದೆಂದರೆ, ಇದು ಸಾಮಾನ್ಯ ಸಂಗತಿಯಲ್ಲ. ಇದು ಭಾರತದಲ್ಲೇ ಪ್ರಪ್ರಥಮ. ಹಾಗಾಗಿಯೇ ಇದು ಮೈಸೂರಿನ ಹೆಮ್ಮೆಯೂ ಹೌದು. ಈಗ ನಮ್ಮ ಮುಂದಿರುವ ಸವಾಲು ಎನ್‌ಟಿಎಂ ಶಾಲೆಯ ನೆಲವನ್ನು ಮೈಸೂರು ಮಾತ್ರವಲ್ಲ, ಇಡೀ ಕರ್ನಾಟಕ ಹಾಗೂ ಸಂವೇದನಾ ಶೀಲ ಭಾರತವೇ ಕಾಪಾಡಿಕೊಳ್ಳಬೇಕು ಎಂದರು.

ಕಳೆದ ೧೫ -೨೦ ದಿನಗಳಿಂದಲೂ ನಿರಂತರವಾಗಿ ಈ ಪ್ರತಿಭಟನೆ, ವೈವಿದ್ಯಮಯ ಜನಸಮೂಹದಿಂದ ನಡೆಯುತ್ತಿರುವ ಆಂದೋಲನ ಹಾಗೂ ಜಾಗೃತಿ ನಡೆಯುತ್ತಿದೆ. ಇದನ್ನು ನೋಡಿದಾಗ ಮೈಸೂರು ನಿದ್ದೆ ಮಾಡದೇ ಜಾಗೃತ ಪ್ರಜ್ಞೆ ಹೊಂದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎನ್ನಿಸುತ್ತಿದೆ. ಈ ವಿಚಾರದಲ್ಲಿ ಸಂವೇದನಾ ಶೀಲ ಪ್ರಜ್ಞಾವಂತರು, ಈ ವಯಸ್ಸಿನವರು ಎಲ್ಲ ಮಗ್ಗಲುಗಳಿಂದಲೂ ಮಾತನಾಡಿದ್ದಾರೆ ಎಂದು ಹೇಳಿದರು.

ಅರ್ಥವಾಗದ ಸ್ವಾಮೀಜಿಗಳ ನಡೆ: ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳ ನಡವಳಿಕೆ ಇನ್ನೂ ನನಗೆ ಅರ್ಥವಾಗದೇ ಉಳಿದಿದೆ. ಹೇಳಿಕೇಳಿ ಅವರು ವೈರಾಗ್ಯ ಮೂರ್ತಿಗಳು. ಇಂಥವರು ಇಂದು ಯಾವೊಂದು ರೂಢಿಯನ್ನು ಹುಟ್ಟುಹಾಕುತ್ತಿದ್ದಾರೆ? ಎನ್‌ಟಿಎಂ ಶಾಲೆ ಆವರಣಕ್ಕೆ ವಿವೇಕಾನಂದರು ಬಂದಿದ್ದರು. ಹಾಗಾಗಿ, ಆ ಜಾಗದಲ್ಲಿ ಆಶ್ರಮಕ್ಕೆ ಬೇಕು ಎಂದು ವಾದ ಮಾಡುವುದಾದರೆ, ಇದು ಎಂತಹ ಸಂದೇಶ ನೀಡುತ್ತದೆ? ಯಾವ ಸ್ವಾಮೀಜಿ, ಯತಿ, ವಿದ್ವಾಂಸರು ಹಾಗೂ ಮಹಾತ್ಮರನ್ನೂ ಮನೆಗೆ ಕರೆಯಬಾರದಿತ್ತೆ. ನಾಳೆ ಆ ಆಶ್ರಮಕ್ಕೂ ಬೆಲೆ ಬಂದಾಗ, ಆ ಮಹಾತ್ಮನ ಅನುಯಾಯಿಗಳು ನಮ್ಮ ಸ್ವಾಮೀಜಿ ಈ ಸ್ಥಳಕ್ಕೆ ಬಂದಿದ್ದರು. ಆ ಜಾಗ ಆಶ್ರಮಕ್ಕೆ ಬೇಕು ಎಂದು ಪಟ್ಟು ಹಿಡಿದರೆ? ನಾನು ಹೇಳುತ್ತಿರುವುದು ಅತಿ ಅನ್ನಿಸುತ್ತಿರಬಹುದು. ಆದರೆ, ಇವರ ಜಾಯಮಾನದಲ್ಲಿ ಒಂದು ಗಳಿಗೆಯಾದರೂ ಬಂದು ಹೋಗಬಾರದಲ್ಲವೇ? ಇಂತಹದೊಂದು ಶಂಕೆಯನ್ನು ರಾಮಕೃಷ್ಣ ಆಶ್ರಮದ ಹಾಲಿ ವೈರಾಗ್ಯಮೂರ್ತಿಗಳು ಹುಟ್ಟುಹಾಕಿಬಿಟ್ಟಿದ್ದಾರೆ. ಇದು ಆಗಬಾರದಿತ್ತು. ತುಂಬಾ ನೋವಾಗುತ್ತದೆ ಎಂದು ವಿಷಾದಿಸಿದರು.

× Chat with us