ಕೇಂದ್ರದಲ್ಲಿ ಗೋಡ್ಸೆ ಸಂತಾನದ ಆಳ್ವಿಕೆ: ದೇವನೂರ ಮಹಾದೇವ

ಮೈಸೂರು: ಕೇಂದ್ರದಲ್ಲಿ ನಾಥೂರಾಮ ಗೋಡ್ಸೆ ಸಂತಾನವೇ ಆಳ್ವಿಕೆ ಮಾಡುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಟೀಕಿಸಿದರು.

ಸಂವಿಧಾನ ರಕ್ಷಣಾ ವೇದಿಕೆ, ರೈತ ಚಳವಳಿ ಬಲಪಡಿಸಲು ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆ, ದಲಿತ ಸಂಘರ್ಷ ಸಮಿತಿ ವತಿಯಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ʻಮಹಾತ್ಮ ಗಾಂಧಿ ಹತ್ಯೆ ದಿನದಂದು ಉಪವಾಸ ಸತ್ಯಾಗ್ರಹʼದಲ್ಲಿ ಅವರು ಮಾತನಾಡಿದರು.

ಯಾವ ರೀತಿ ರಾಜಕೀಯ ಮಾಡುತ್ತಿದೆ ಅಂದ್ರೆ, ಒಂದು ಕಡೆಯಿಂದ ಎಲ್ಲವನ್ನೂ ಹತ್ಯೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನ, ಕಾರ್ಯಾಂಗ ಹತ್ಯೆಯಾಗಿದೆ. ಚುನಾವಣೆ ಆಯೋಗ ಹತ್ಯೆಯಾಗುತ್ತಿದೆ, ನ್ಯಾಯಾಂಗದ ಪರಿಸ್ಥಿತಿ ಡೋಲಾಯಮಾನವಾಗಿದೆ. ಸಾರ್ವಜನಿಕ ಸಂಸ್ಥೆಗಳು, ಮಾಧ್ಯಮಗಳು, ಸಾರ್ವಜನಿಕ ಆಸ್ತಿ-ಪಾಸ್ತಿಗಳ ಹತ್ಯೆಯೂ ಆಗುತ್ತಿದೆ. ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ನೀವು ಕೊಟ್ಟ ಭರವಸೆ ಯಾಕೆ ಈಡೇರಿಸಲಿಲ್ಲ ಎಂದು ಅಮಿತ್‌ ಶಾ ಅವರನ್ನು ಪ್ರಶ್ನಿಸುತ್ತಾರೆ. ಆಗ ಅಮಿತ್‌ ಶಾ ನಸುನಗುತ್ತಾ ʻಅದೆಲ್ಲ ಪೊಲಿಟಿಕಲ್‌ ಜುಮ್ಲಾʼ ಎಂದು ಪ್ರತಿಕ್ರಿಯಿಸುತ್ತಾರೆ. ʻಪೊಲಿಟಿಕಲ್‌ ಜುಮ್ಲಾʼ ಅಂದರೆ ಹುಸಿ ಭರವಸೆ ಅಂತರ್ಥ. ಫೇಸ್‌ ವ್ಯಾಲ್ಯೂ ಉಳಿಸಿಕೊಳ್ಳಲು, ವಚನಬದ್ಧತೆ ಇಲ್ಲದ, ಮುಗ್ದ ಜನರನ್ನು ಮೂರ್ಖರನ್ನಾಗಿಸಲು ಹೇಳುವ ಬಾಯಿ ಮಾತು ಎಂದು ಕೂಡ ಅರ್ಥಗಳಿವೆ. ಹೀಗೆ ಮಾಡಿ ಅಧಿಕಾರ ಹಿಡಿದುಬಿಟ್ಟರು. ಬಿಜೆಪಿ, ಸಂಘಪರಿವಾರದ ರಾಜಕಾರಣ ಪೊಲಿಟಿಕಲ್‌ ಜುಮ್ಲಾ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.

ರೈತ ಬೆಳೆದದ್ದನ್ನು ತಿಂದು ಬದುಕುತ್ತಿರುವ ನಾಗರಿಕ ಸಮಾಜ, ತಮಗೂ ರೈತರ ಹೋರಾಟಕ್ಕೆ ಸಂಬಂಧ ಇಲ್ಲವೇ ಎಂದು ಪ್ರಶ್ನಿಸಿಕೊಳ್ಳಬೇಕು. ಜೊತೆಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಸಿದರು.

ಬಿಜೆಪಿ ಅವರದು ಒಂದು ರೀತಿಯ ಭೂಗತ ರಾಜಕಾರಣ. ಇದೆಲ್ಲ ನಮಗೆ ಗೊತ್ತಾಗಲ್ಲ ಎಂದರು.

ʻಜೈ ಶ್ರೀರಾಮ್‌ʼ… ದೇವಸ್ಥಾನಕ್ಕೆ ಕಾಣಿಕೆ ಕೊಡಿ ಅಂತ ಸಂಘಪರಿವಾರದವರು, ಸ್ವಾಮೀಜಿಗಳು ಮಠಗಳಿಗೆ, ಎಲ್ಲ ಕಡೆ ಹೋಗುತ್ತಿದ್ದಾರೆ. ಅವರು ಜೈ ಶ್ರೀರಾಮ್‌ ಎಂದರೆ, ನೀವು ಕನ್ಹಯ್ಯ ಕುಮಾರ್‌ ಅವರಂತೆ ʻಜೈ ಸೀತಾರಾಮ್‌ʼ ಎಂದು ಹೇಳಿ. ಗಂಡ ಹೆಂಡತಿಯನ್ನು ಬೇರೆ ಬೇರೆ ಮಾಡಬೇಡ್ರಪ್ಪ ಎಂದು ಮನವಿ ಮಾಡಿ. ಅವರು ಕಾಣಿಕೆ ಕೇಳಿದರೆ ಕೊಡುತ್ತೇವೆ. ದಯವಿಟ್ಟು ರೈತರಿಗೆ ಮಾರಕವಾಗಿರುವ ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರವನ್ನು ಒತ್ತಾಯಿಸುವಂತೆ ಅವರಿಗೂ ಹೇಳಿ. ಇದನ್ನು ಪ್ರತಿಯೊಬ್ಬ ನಾಗರಿಕರು ಮಾಡಬೇಕು ಎಂದು ಸಲಹೆ ನೀಡಿದರು.

× Chat with us