ಕುಖ್ಯಾತ ಖದೀಮರ ಬಂಧನ

ಮೈಸೂರು : ವಿವಿಧ ೧೩ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಖದೀಮರನ್ನು ಬಂಧಿಸಿರುವ ಮೇಟಗಳ್ಳಿ ಪೊಲೀಸರು. ೨೦ ಸಾವಿರ ರೂ., ೧ ಬೈಕ್, ೨ ಮೊಬೈಲ್ ವಶ ಪಡಿಸಿಕೊಂಡಿದ್ದಾರೆ.

ಕೆಸರೆ ನಿವಾಸಿಗಳಾದ ಜಮೀಲ್ ಖಾನ್ (೨೮), ಶಂಕರ್ (೪೨) ಬಂಧಿಸಿದ್ದಾರೆ. ಇವರ ವಿರುದ್ಧ ೧೨ ರಾಬರಿ, ಎಕ್ಸ್‌ಟಾರ್ಷನ್ ಮತ್ತು ಒಂದು ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಫೆ.೨೨ರಂದು ವ್ಯಕ್ತಿಯೊಬ್ಬರು ವಿಜಯನಗರ ೩ನೇ ಹಂತದ ತನ್ನ ಮನೆಯಿಂದ ಕಾರ್ಯನಿಮಿತ್ತ ಪಾಂಡವಪುರಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಬೆಂಗಳೂರು-ಮೈಸೂರು ರಸ್ತೆಯ ಸಿದ್ದಲಿಂಗಪುರದ ಬಳಿ ಕಾರಿಗೆ ಸಣ್ಣ ಶಬ್ದವಾಗಿದ್ದು, ರಸ್ತೆಯಲ್ಲಿ ಬಿದ್ದಿರುವ ಯಾವುದೋ ಕಲ್ಲು ಸಿಡಿದು ಶಬ್ದವಾಗಿರಬಹುದೆಂದು ಹಾಗೆಯೇ ಮುಂದೆ ಸಾಗುತ್ತಿರುವಾಗ ಇದ್ದಕ್ಕಿದ್ದಂತೆ ಒಂದು ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಇವರ ಕಾರನ್ನು ಬೆನ್ನಟ್ಟಿದ್ದಾರೆ.

ಬಂದು ಕಾರನ್ನು ಸೈಡಿಗೆ ನಿಲ್ಲಿಸಿ, ಒಬ್ಬಾತ ನೀವು ನಮ್ಮ ಬೈಕಿಗೆ ಹಿಟ್ ಅಂಡ್ ರನ್ ಮಾಡಿ ಬಂದಿದ್ದು ನಮ್ಮ ಬೈಕಿನಲ್ಲಿ ಹಿಂದೆ ಕುಳಿತವನಿಗೆ ಕಾಲು ಮುರಿದು ಹೋಗಿದೆ ನೀವು ಕೂಡಲೇ ಇವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಅಥವಾ ಹಣ ಕೊಡಿ ನಾವು ಚಿಕಿತ್ಸೆ ಪಡೆದುಕೊಳ್ಳುತ್ತೇವೆ. ಇಲ್ಲವಾದರೆ, ನಿಮ್ಮ ಮೇಲೆ ಈಗಲೇ ಪೊಲೀಸರಿಗೆ ಹಿಟ್ ಅಂಡ್ ರನ್ ಕೇಸ್ ಕೊಟ್ಟು ಒಳಗೆ ಹಾಕಿಸುತ್ತೇವೆಂದು. ಅಡ್ಡಗಟ್ಟಿ ಬಾಯಿಗೆ ಬಂದಂತೆ ಬೈಯ್ದು ಬೆದರಿಕೆ ಒಡ್ಡುತ್ತಾನೆ. ಇದೇ
ಸಮಯದಲ್ಲಿ ಆ ಬೈಕಿನಲ್ಲಿ ಹಿಂದೆ ಕುಳಿತವನು ತನ್ನ ಒಂದು ಕಾಲಿನ ಮೇಲೆ ನೀರನ್ನು ಹಾಕಿಕೊಂಡು ಕಾಲು ಮುರಿದು ಹೋಗಿದೆ ಎಂಬಂತೆ ನಾಟಕವಾಡಿ ಗೋಳಾಡಿ ಕಿರುಚುತ್ತಾ ಕಾರಿನವನಿಗೆ ಬಾಯಿಗೆ ಬಂದಂತೆ ಬೈಯುತ್ತಿರುತ್ತಾನೆ. ಇದರಿಂದ ಗಾಬರಿಗೊಂಡ ಕಾರು ಚಾಲಕ ತನ್ನ ಬಳಿ ಇದ್ದ ಸಾವಿರ ರೂ. ಹಣವನ್ನು ಇವರಿಗೆ ನೀಡುತ್ತಾನೆ. ಆದರೆ, ಇವರು ಇದಕ್ಕೆ ಒಪ್ಪದೇ ಎ.ಟಿ.ಎಮ್ ಕಾರ್ಡ್‌ನಿಂದ ಹಣ ಬಿಡಿಸಿಕೊಡು ಎಂದು ಹೆದರಿಸಿರುತ್ತಾರೆ. ವ್ಯಕ್ತಿಯು ಆ ದಿವಸ ಎ.ಟಿ.ಎಮ್ ಕಾರ್ಡ್ ತಂದಿರುವುದಿಲ್ಲ ಆಗ ಅನಿವಾರ್ಯವಾಗಿ ಇವರುಗಳು ಆತನಿಂದ ಗೂಗಲ್ ಪೇ ಮೂಲಕ ಹಣವನ್ನು ಕಳುಹಿಸು ಎಂದು ಹೇಳಿದಾಗ ಈತನು ತನ್ನ ಸಂಬಂಧಿಕರ ಗೂಗಲ್ ಪೇ ನಿಂದ ಇವರ ಖಾತೆಗೆ ೧೯ ಸಾವಿರ ರೂ. ಹಣವನ್ನು ಹಾಕಿಸುತ್ತಾನೆ. ಆನಂತರ ವ್ಯಕ್ತಿಯನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಎಕ್ಸ್‌ಟಾರ್ಷನ್ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಮೇರೆಗೆ ಮಾ.೧೭ರಂದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಮ್ಮ ಟಿ.ವಿ.ಎಸ್ ಪ್ಲೇಮ್ ಎಂಬ ಮೋಟರ್ ಬೈಕಿನಲ್ಲಿ ಸಿದ್ದಲಿಂಗಪುರದ ಬಳಿ ಹೋಗುತ್ತಿದ್ದ ಕಾರಿನ ಹಿಂಭಾಗದ ಡೋರ್‌ಗೆ ಕಾರು ಚಾಲಕನಿಗೆ ಗೊತ್ತಾಗದಂತೆ ಜೋರಾಗಿ ಹೊಡೆದು ಇದನ್ನೇ ಅಪಘಾತವೆಂದು ಭಾವಿಸುವಂತೆ ಮಾಡಿ ಆತನಿಂದ ಹೆದರಿಸಿ ಹಣ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳಿಂದ ೨೦ ಸಾವಿರ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ೧ ಬೈಕ್ ಮತ್ತು ೨ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇವರು ೨೦೧೭ ರಿಂದ ಇಲ್ಲಿಯವರೆಗೆ ಇದೇ ತರಹದ ಸಾಕಷ್ಟು ಪ್ರಕರಣಗಳನ್ನು ಮಾಡಿರುವುದಾಗಿ ತಿಳಿದು ಬಂದಿದ್ದು, ಇವರ ವಿರುದ್ಧ ಮೈಸೂರು ನಗರದ ಕುವೆಂಪುನಗರ, ವಿ.ವಿ ಪುರಂ, ಜಯಲಕ್ಷ್ಮೀಪುರಂ, ಸರಸ್ವತಿ ಪುರಂ, ನರಸಿಂಹರಾಜ ಪೊಲೀಸ್ ಠಾಣೆಗಳಲ್ಲಿ ಮತ್ತು ಇಲವಾಲ ಪೊಲೀಸ್ ಠಾಣೆ, ಮದ್ದೂರು ಪೊಲೀಸ್ ಠಾಣೆ, ಶ್ರೀರಂಗಪಟ್ಟಣ ಗ್ರಾಮಾಂತರ ಹಾಗೂ ಟೌನ್ ಠಾಣೆಗಳಲ್ಲಿ ಬೆಂಗಳೂರಿನ ಚಾಮರಾಜ ಪೇಟೆ ಮತ್ತು ಕುಂಬಳಗೋಡು ಪೊಲೀಸ್ ಠಾಣೆಗಳಲ್ಲಿ ಮತ್ತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ತಲಾ ೧ ರಂತೆ ಒಟ್ಟು ೧೨ ರಾಬರಿ, ಎಕ್ಸ್‌ಟಾರ್ಷನ್ ಮತ್ತು ಒಂದು ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಡಿಸಿಪಿಗಳಾದ ಡಾ.ಎ.ಎನ್. ಪ್ರಕಾಶ್‌ಗೌಡ, ಗೀತಪ್ರಸನ್ನ, ನರಸಿಂಹರಾಜ ವಿಭಾಗದ ಎ.ಸಿ.ಪಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ
ಮೇಟಗಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಎ.ಮಲ್ಲೇಶ್, ಪಿ.ಎಸ್.ಐಗಳಾದ ವಿಶ್ವನಾಥ್, ನಾಗರಾಜ ನಾಯಕ್ ಮತ್ತು ಎ.ಎಸ್.ಐ ಪೊನ್ನಪ್ಪ, ಮಹದೇವ್ ಸಿಬ್ಬಂದಿಯವರಾದ ದಿವಾಕರ್, ಪ್ರಶಾಂತ್, ಬಸವರಾಜು, ಲಿಖಿತ್, ಆಶಾ ಇದ್ದರು.

× Chat with us