ಡಿಸಿ ಅಧಿಕೃತ ನಿವಾಸದಲ್ಲಿ ನಿರ್ಮಿಸಲಾದ ಈಜುಕೊಳದ ಚಿತ್ರಗಳು ವೈರಲ್‌

ಮೈಸೂರು: ನಗರಪಾಲಿಕೆ ಮಾಜಿ ಸದಸ್ಯ ಕೆವಿ ಮಲ್ಲೇಶ್‌ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಧಿಕೃತ ನಿವಾಸದಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿರುವ ಈಜುಕೊಳದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮಲ್ಲೇಶ್‌ ಅವರು ಸ್ವಿಮ್ಮಿಂಗ್‌ಪೂಲ್‌ನ ಹಲವಾರು ಫೋಟೊಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಮಕ್ಕಳ ಮತ್ತು ವಯಸ್ಕರ ಪೂಲ್‌ ಇದೆ. ಇದು ಒಳಾಂಗಣ ಈಜುಕೊಳವಾಗಿದ್ದು ಮೇಲ್ಚಾವಣೆ ನಿರ್ಮಿಸಲಾಗಿದೆ.

ಪಾರಂಪರಿಕ ಕಟ್ಟಡವಾಗಿರುವ ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ರೋಹಿಣಿ ಸಿಂಧೂರಿ ಅವರು ನಿಯಮ ಮೀರಿ ಈಜುಕೊಳ ಕಟ್ಟಿಸಿದ್ದಾರೆ ಎಂದು ಕೆವಿ ಮಲ್ಲೇಶ್‌ ಅವರು ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ನಿರ್ಮಿಸಿರುವ ಈಜುಕೊಳ, ಜಿಮ್ ಕುರಿತು ತನಿಖೆ ನಡೆಸಿ ಏಳು ದಿನದೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು.

ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸವಾದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟಾಗಿರುವ ಬಗ್ಗೆ ಶಾಸಕ ಸಾ.ರಾ.ಮಹೇಶ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ತುಮಕೂರಿನ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಅವರು ಕೊಟ್ಟಿರುವ ದೂರು, ಪತ್ರವನ್ನು ಉಲ್ಲೇಖಿಸಿರುವ ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಕೆ.ಎನ್.ಮೂರ್ತಿ ಅವರು ಪ್ರಾದೇಶಿಕ ಆಯುಕ್ತರಿಗೆ ತುರ್ತು ಪತ್ರದ ಮೂಲಕ ತನಿಖೆಗೆ ಆದೇಶ ನೀಡಿದ್ದರು.

× Chat with us