BREAKING NEWS

ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ : ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕು

ಬೆಂಗಳೂರು-ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಕೆಲವರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ.
ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವವರಿಗೆ ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿರುವ ಹಾಗೂ ಇನ್ನಿತರ ಕಾರಣಗಳಿಂದ ಕೆಲವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಹೀಗಾಗಿ ಅವರು ತಮ್ಮ ತಮ್ಮ ಗಾಡ್ ಫಾದರ್‌ಗಳ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವುದರಿಂದ ತಮ್ಮ ನಾಲ್ಕು ದಶಕಗಳ ರಾಜಕೀಯ ಹೋರಾಟದಿಂದ ಹಿಂದೆ ಸರಿಯಲಿದ್ದಾರೆ.
ವಯಸ್ಸು ಹಾಗೂ ಕೆಲವು ಗುರುತರ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪುವ ಭೀತಿ ಬಿಟ್ಟು ಬಿಡದಂತೆ ಕಾಡುತ್ತಿದೆ.
ಶಿವಮೊಗ್ಗ ನಗರದಿಂದ ಅವರಿಗೆ ಟಿಕೆಟ್ ಕೊಡಬಾರದೆಂದು ಕಾರ್ಯಕರ್ತರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಕ್ಷದವರ ಮೇಲೆ ಒತ್ತಡ ಹಾಕಿದ್ದಾರೆ.
ವಿಧಾನಪರಿಷತ್ ಹಾಲಿ ಸದಸ್ಯ ಅಯನೂರು ಮಂಜುನಾಥ್, ಶಿವಮೊಗ್ಗ ನಗರದ ಹೆಸರಾಂತ ವೈದ್ಯ ಚನ್ನಗಿರಿ ಮೂಲದ ಡಾ.ಧನಂಜಯ್ಯ ಸರ್ಜಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಹೀಗಾಗಿ ಈಶ್ವರಪ್ಪನವರಿಗೆ ಟಿಕೆಟ್ ಸಿಗುತ್ತದೆಯೇ ಇಲ್ಲವೇ ಅವರ ಪುತ್ರ ಕಾಂತೇಶ್ ಸ್ಪರ್ಧೆ ಮಾಡಲಿದ್ದಾರೆಯೇ ಎಂಬುದು ಕೊನೆ ಕ್ಷಣದವರೆಗೂ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಕ್ಷೇತ್ರದಲ್ಲಿ ಸ್ವಪಕ್ಷೀಯರಿಂದಲೇ ವಿರೋಧ ಎದುರಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿಗೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಖಚಿತತೆ ಇಲ್ಲ.
ವಿಜಯ ಸಂಕಲ್ಪ ಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವು ನಾಯಕರನ್ನು ಪಕ್ಷದ ಕಾರ್ಯಕರ್ತರೇ ರಸ್ತೆಯಲ್ಲೇ ಅಡ್ಡಗಟ್ಟಿ ಕುಮಾರಸ್ವಾಮಿಗೆ ಟಿಕೆಟ್ ಕೊಡಬಾರದು ಎಂದು ದಾಂಧಲೆ ಎಬ್ಬಿಸಿದ್ದರು. ಹೀಗಾಗಿ ಕುಮಾರಸ್ವಾಮಿ ಪರಿಸ್ಥಿತಿ ಡೋಲಾಯಮಾನವಾಗಿದೆ.
ರಾಜಧಾನಿ ಬೆಂಗಳೂರಿನ ಗೋವಿಂದರಾಜನಗರ ಮತ್ತು ಚಾಮರಾಜನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸೋಮಣ್ಣ ಪರಿಸ್ಥಿತಿ ಕೂಡ ವಿಭಿನ್ನವಾಗಿಲ್ಲ. ಸದ್ಯಕ್ಕೆ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಗಳು ಕ್ಷೀಣಿಸಿವೆ.
ತಮ್ಮ ಪುತ್ರ ಅರುಣ್ ಸೋಮಣ್ಣ ಅವರಿಗೆ ಗೋವಿಂದರಾಜನಗರಕ್ಕೆ ಹಾಗೂ ತಮಗೆ ಚಾಮರಾಜನಗರಕ್ಕೆ ಟಿಕೆಟ್ ಕೊಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಶಿಕಾರಿಪುರದಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರಕ್ಕೆ ಸೀಮಿತವಾಗಿ ಒಂದೇ ಕ್ಷೇತ್ರಕ್ಕೆ ಸ್ಪರ್ಧಿಸಿದರೆ ಅವರೆದುರು ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಬಿಜೆಪಿ ಲೆಕ್ಕ ಹಾಕಿದೆ.
ಈ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಮತಗಳು ನಿರ್ಣಾಯಕವಾಗಿರುವುದು ಹಾಗೂ ವಿಜಯೇಂದ್ರ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯನವರನ್ನು ವರುಣಾದಲ್ಲಿ ಕಟ್ಟಿ ಹಾಕಬಹುದು ಎಂಬ ದೂರದೃಷ್ಟಿಯಿಂದ ವಿಜಯೇಂದ್ರ ಅವರಿಗೆ ಭಾರೀ ಬೇಡಿಕೆ ಬಂದಿದೆ.
ಸೊರಬಾದಲ್ಲೂ ಕುಮಾರಬಂಗಾರಪ್ಪಗೆ ಟಿಕೆಟ್ ಕೊಡಬಾರದೆಂದು ಸ್ವಪಕ್ಷದವರೇ ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕ್ಷೇತ್ರವನ್ನು ನಿರ್ಲಕ್ಷಿಸಿರುವವರ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಕೇಳಿಬಂದಿದೆ.
ವಯಸ್ಸಿನ ಕಾರಣದಿಂದ ಗೋವಿಂದ ಕಾರಜೋಳ, ಅನರ್ಹತೆ ಭೀತಿ ಎದುರಿಸುತ್ತಿರುವ ನೆಹರು ಓಲೇಕರ್, ಕಳೆದ ಬಾರಿಯೇ ನನ್ನ ಕೊನೆಯ ಚುನಾವಣೆ ಎಂದಿದ್ದ ಕೆ.ಜಿ.ಬೋಪಯ್ಯ, ವಿವಾದಕ್ಕೆ ಸಿಲುಕಿರುವ ಬಸವರಾಜ್ ದಡೇಸೂರ್, ಎನ್.ಐ.ಗೋಪಾಲಕೃಷ್ಣ ಸೇರಿದಂತೆ ಮತ್ತಿತರರಿಗೆ ಟಿಕೆಟ್ ಕೈ ತಪ್ಪಿದರೂ ಅಚ್ಚರಿ ಇಲ್ಲ.
ಈಗಾಗಲೇ ಪಕ್ಷದ ವತಿಯಿಂದ ಕೆಲವರಿಗೆ ಮಾಹಿತಿ ನೀಡಲಾಗಿದ್ದು,ಕಾರ್ಯಕರ್ತರಿಗೆ ಸಜ್ಜಾಗುವಂತೆ ಸೂಚನೆ ಕೊಡಲಾಗಿದೆ.

lokesh

Recent Posts

ಮದ್ದೂರು |‌ ದೇವಾಲಯಗಳಲ್ಲಿ ಸರಣಿ ಕಳ್ಳತನ

ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…

2 hours ago

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

4 hours ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

4 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

4 hours ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

4 hours ago

ಮಂಡ್ಯದಲ್ಲಿ ಶ್ರೀಪುರುಷ ಹೆಸರಿನಲ್ಲಿ “ಕನ್ನಡ ಭವನ”

ಮಂಡ್ಯ : ಸಕ್ಕರೆ ನಗರ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯ, ರಾಷ್ಟ್ರ ಹಾಗೂ…

4 hours ago