ಕೂಂಬಿಂಗ್ ಸ್ಪೆಷಲಿಸ್ಟ್ ʻಅಭಿಮನ್ಯುʼವೇ ಅಂಬಾರಿ ಸಾರಥಿ; ದಸರಾ ಆನೆಗಳ ಅಧಿಕೃತ ಆಯ್ಕೆ ಪಟ್ಟಿ ಪ್ರಕಟ!

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಈ ಬಾರಿಯೂ ಚಿನ್ನದ ಅಂಬಾರಿ ಹೊರುವ ಹೊಣೆ ಕೂಂಬಿಂಗ್ ಸ್ಪೆಷಲಿಸ್ಟ್ ‘ಅಭಿಮನ್ಯು’ನದ್ದೇ ಆಗಿದೆ.

ಮೈಸೂರಿನ ಅಂಬಾವಿಲಾಸ ಅರಮನೆ ಮಂಡಳಿ ಕಚೇರಿಯಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ದಸರಾ ಆನೆಗಳ ಆಯ್ಕೆಯ ಅಧೀಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

2021ನೇ ಸಾಲಿನ ಸರಳ ಸಾಂಪ್ರದಾಯಿಕ ದಸರಾ ಉತ್ಸವದಲ್ಲಿ ಅಂಬಾರಿ ಹೊರಲಿರುವ ಗಜಪಡೆಯ ನಾಯಕ, ಮತ್ತಿಗೋಡು ಶಿಬಿರದ ಅಭಿಮನ್ಯು(56), ಗೋಪಾಲಸ್ವಾಮಿ(38), ಆನೆಕಾಡು ಶಿಬಿರದ ವಿಕ್ರಮ(58), ದುಬಾರೆ ಶಿಬಿರದ ಕಾವೇರಿ(44), ಧನಂಜಯ(43), ನಾಗರಹೊಳೆಯ ದೊಡ್ಡಹರವೆ ಶಿಬಿರದ ಅಶ್ವತ್ಥಾಮ(34), ಬಂಡೀಪುರ ರಾಂಪುರ ಶಿಬಿರದ ಚೈತ್ರಾ (48) ಹಾಗೂ ಲಕ್ಷ್ಮೀ(20) ಆನೆಗಳು ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ.

ಲಕ್ಷ್ಮೀ ಎಲ್ಲರಿಗಿಂತ ಕಿರಿಯಳು; ಅಶ್ವತ್ಥಾಮನಿಗಿದು ಮೊದಲ ದಸರಾ
ಸದ್ಯ ದಸರಾ ಆನೆಗಳ ಅಧಿಕೃತ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಆನೆಗಳ ಪೈಕಿ 17 ವರ್ಷದ ಲಕ್ಷ್ಮೀ ಅತೀ ಚಿಕ್ಕ ವಯಸ್ಸಿನ ಆನೆಯಾಗಿದೆ. ಇನ್ನು ಹಾಗೂ ಅಶ್ವತ್ಥಾಮ ಆನೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಆನೆಯಾಗಿದೆ.

× Chat with us