ಮೈಸೂರು: ಸ್ವಾತಂತ್ರ್ಯೋತ್ಸವ ದಿನದಂದು ಕೇಂದ್ರದ ವಿರುದ್ಧ ಕರಪತ್ರ ಹಂಚುತ್ತಿದ್ದ ದಸಂಸ ಕಾರ್ಯಕರ್ತರ ಬಂಧನ

ಮೈಸೂರು: 75ನೇ ಸ್ವಾತಂತ್ರ್ಯೋತ್ಸವ ದಿನದಂದು (ಭಾನುವಾರ) ಜಿಲ್ಲಾಧಿಕಾರಿ ಕಚೇರಿ ಬಳಿ ಕೇಂದ್ರ ಸರ್ಕಾರದ ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿ ಕರಪತ್ರ ಹಂಚುತ್ತಿದ್ದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಕೇಂದ್ರದ ಆಡಳಿತದ ವಿರುದ್ಧ ಕರಪತ್ರ ಹಂಚಲಾಗುತ್ತಿತ್ತು. ಈ ವೇಳೆ ಅವರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಮೂರು ಕೃಷಿ ಕಾಯ್ದೆಗಳು, ಗೋ ಸಂರಕ್ಷಣಾ ಕಾಯ್ದೆ, ಬ್ಯಾಂಕ್‌ಗಳ ವಿಲೀನದಿಂದ ಉದ್ಯೋಗ ಕುಸಿತ, ವಿದ್ಯುತ್‌ ಖಾಸಗೀಕರಣ, ರಾಷ್ಟ್ರೀಯ ಶಿಕ್ಷಣ ನೀತಿ-2020, ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆಯಂತಹ ಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಕಾರ್ಪೊರೇಟ್‌ ಕುಳಗಳು ಮಾತ್ರ ಬೆಳೆಯುತ್ತಿದ್ದಾರೆ. ಈ ನೀತಿಗಳನ್ನು ವಿರೋಧಿಸುವುದರೊಂದಿಗೆ ಜನಸಾಮಾನ್ಯರ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯ ದಿನಾಚರಣೆ ಆಶಯವನ್ನು ಸಂಘಟನಾಕಾರರು ವ್ಯಕ್ತಪಡಿಸಿದ್ದಾರೆ.

× Chat with us