ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಡ್ರೈ ರನ್ ಆರಂಭ: ಎಲ್ಲೆಲ್ಲಿ?

ಮೈಸೂರು: ಮೈಸೂರು ಜಿಲ್ಲೆಯಲ್ಲೂ ಕೋವಿಡ್‌ ಲಸಿಕೆ ನೀಡುವ ಡ್ರೈ ರನ್‌ (ತಾಲೀಮು) ಆರಂಭವಾಗಿದ್ದು, ಜಿಲ್ಲೆಯ ಮೂರು ಕಡೆ ಕೇಂದ್ರಗಳನ್ನು ತೆರೆಯಲಾಗಿದೆ.

ಜಯನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯ್ದ 25 ಮಂದಿಗೆ ಲಸಿಕೆ ನೀಡುವ ಡ್ರೈ ರನ್‌ ನಡೆಸಲಾಯಿತು. ಕೆ.ಆರ್.ನಗರದ ತಾಲ್ಲೂಕು ಆರೋಗ್ಯ ಕೇಂದ್ರ, ಬಿಳಿಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಡ್ರೈ ರನ್‌ ನಡೆಸಲಾಗುತ್ತಿದೆ.

ಡ್ರೈ ರನ್‌ ಪ್ರಕ್ರಿಯೆ ಹೇಗೆ?

ಆಯ್ದ ಆರೋಗ್ಯ ಕಾರ್ಯಕರ್ತರ ನೋಂದಣಿ ಮಾಡುವುದು, ಅವರಿಗೆ ಸಂದೇಶ ಬಂದ ನಂತರ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕು. ಅವರು 30 ನಿಮಿಷ ನಿಗಾದಲ್ಲಿರಬೇಕು. ಮೊದಲ ಹಂತದಲ್ಲಿ ಒಂದು ಡೋಸ್‌ ಲಸಿಕೆ ನೀಡಲಾಗುವುದು. 28 ದಿನಗಳ ಮತ್ತೊಂದು ಡೋಸ್‌ ಪಡೆಯಬಹುದು.

ಮೈಸೂರಿನಲ್ಲಿರುವ ಜಯನಗರ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಈ ಕುರಿತು ಮಾತನಾಡಿದ ಅವರು, ʻದೇಶದಲ್ಲಿ ಕೋವಿಡ್‌ ಲಸಿಕೆ ನೀಡುವ ಡ್ರೈ ರನ್‌ ಆರಂಭಿಸಲಾಗಿದ್ದು, ಮೈಸೂರು ಜಿಲ್ಲೆಯ ಮೂರು ಕಡೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಕೇಂದ್ರದ ಮಾರ್ಗಸೂಚಿಯಂತೆ ಆರಂಭದಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 32,000 ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲಸಿಕೆ ಬಗ್ಗೆ ನಮಗೆ ನಿಖರ ಮಾಹಿತಿ ಇಲ್ಲ. ಆದರೆ, ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಲಸಿಕೆ ಸಂಗ್ರಹ ಮತ್ತು ವಿತರಣೆ ಸಂಬಂಧ ಸಿದ್ಧತೆ ನಡೆಯುತ್ತಿದೆ ಎಂದು ವಿವರಿಸಿದರು.

× Chat with us