ಕೋವಿಡ್: ಮೃತಪಟ್ಟ ವೃದ್ಧೆಯ ಮಾಂಗಲ್ಯ ಸರವೇ ನಾಪತ್ತೆ‌, ಮಾಜಿ ಸೈನಿಕನ ವಸ್ತುಗಳೂ ಕಾಣೆ!

ಮಡಿಕೇರಿ: ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಫೋನ್ ಕಳ್ಳತನವಾಗಿದ್ದ ಪ್ರಕರಣದ ಬೆನ್ನಲ್ಲೇ ಮೃತ ವೃದ್ಧೆಯ ಮಾಂಗಲ್ಯ ಸರವನ್ನೇ ಕಳವು ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕೋವಿಡ್‌ನಿಂದ ಮೃತಪಟ್ಟ ಕಮಲ ಎಂಬ ವೃದ್ಧೆಯ ಒಂದೂವರೆ ಲಕ್ಷ ರೂ. ಮೌಲ್ಯದ 25 ಗ್ರಾಂ ಚಿನ್ನದ ಸರವನ್ನೇ ದಾದಿಯರು ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ.

ಸೋಮವಾರಪೇಟೆ ತಾಲ್ಲೂಕಿನ ರಸೂಲ್‌ಪುರ ಗ್ರಾಮದ ಕಮಲಾ ಅವರನ್ನು ಮೇ ೧ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಸಾಮಾನ್ಯ ವಾರ್ಡಿನಲ್ಲೇ ದಾಖಲಾಗಿದ್ದ ಕಮಲ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದರಿಂದ ಮೇ ೨ರಂದು ಐಸಿಯ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ದಾದಿಯರು ಕಮಲ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ. ಐಸಿಯು ವಾರ್ಡಿನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ವೃದ್ಧೆ ಕಮಲ ತನ್ನ ಮಗ ಮೊಣ್ಣಪ್ಪ ಅವರಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದರು.

ಇದಾದ ಕೆಲವೇ ದಿನಗಳಲ್ಲಿ ಅಂದರೆ ಮೇ 19 ರಂದು ಕೋವಿಡ್ ಆಸ್ಪತ್ರೆyಲ್ಲೇ ವೃದ್ಧೆ ಕಮಲ ಮೃತಪಟ್ಟಿದ್ದರು. 20ರಂದು ಅಂತ್ಯಕ್ರಿಯೆ ನೆರವೇರಿಸಿದ ಮೊಣ್ಣಪ್ಪ 21ರಂದು ಮಡಿಕೇರಿ ಆಸ್ಪತ್ರೆಗೆ ಬಂದು ತನ್ನ ತಾಯಿಯ ವಸ್ತುಗಳನ್ನು ಕೇಳಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೇವಲ ಬ್ಯಾಗ್ ಮಾತ್ರ ನೀಡಿದರು. ತನ್ನ ತಾಯಿಯ ಮಾಂಗಲ್ಯವನ್ನು ಕೊಟ್ಟಿಲ್ಲ ಎಂದು ಮೊಣ್ಣಪ್ಪ ಕೋವಿಡ್ ಆಸ್ಪತ್ರೆ ಡೀನ್ ಮತ್ತು ಮಡಿಕೇರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಆಸ್ಪತ್ರೆಯಲ್ಲಿ ಈ ರೀತಿ ಆಗಬಾರದಿತ್ತು. ಇದು ಅತ್ಯಂತ ಅಮಾನವೀಯ ಘಟನೆ. ಈ ಕುರಿತು ಈಗಾಗಲೇ ಆಸ್ಪತ್ರೆಯಲ್ಲಿ ತನಿಖೆ ನಡೆಯುತ್ತಿದೆ. ಎಲ್ಲ ವಾರ್ಡುಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.

ಮಾಜಿ ಯೋಧನ ವಸ್ತುಗಳೂ ನಾಪತ್ತೆ

ಯೋಧರ ತವರು ನಾಡು ಎಂದೇ ಪರಿಗಣಿತವಾಗಿರುವ ಕೊಡಗಿನಲ್ಲಿ ಮತ್ತೊಂದು ದಾರುಣ ಘಟನೆ ತಡವಾಗಿ ವರದಿಯಾಗಿದೆ. ಕೊರೊನಾ ಸೋಂಕಿನಿಂದ ಮಾಜಿ ಸೈನಿಕರೊಬ್ಬರಿಗೆ ಸೇರಿದ ವಸ್ತುಗಳೂ ಮಾಯವಾಗಿವೆ. ಕೊರೊನಾಂದ ಮೃತಪಟ್ಟ ಮಾಜಿ ಸೈನಿಕ ಧರ್ಮಪ್ಪ(61) ಅವರಿಗೆ ಸೇರಿದ ವಸ್ತುಗಳು ಕಾಣೆ ಅಗಿವೆ. 20 ದಿನ ಕಳೆದರೂ ಮಡಿಕೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಯು ಧರ್ಮಪ್ಪ ಅವರ ಸಂಬಂಧಿಕರಿಗೆ ವಸ್ತುಗಳನ್ನು ಹಿಂದಿರುಗಿಸಿಲ್ಲ. ಇದೀಗ ಧರ್ಮಪ್ಪ ಕುಟುಂಬಸ್ಥರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

× Chat with us