ಮೈಸೂರು: ಇಂದು ಜಿಲ್ಲೆಯ 170 ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ಮೇಳ

ಮೈಸೂರು: ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವ ಜೊತೆಗೆ ಸೋಂಕಿನಿಂದ ಪಾರು ಮಾಡಲು ಲಸಿಕೆ ಹಾಕುವುದು ಅಗತ್ಯವಾಗಿದ್ದು, ವಿಶ್ವ ಯೋಗ ದಿನದ ಪ್ರಯುಕ್ತ ಸೋಮವಾರ ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬೃಹತ್ ಮೇಳಕ್ಕಾಗಿ ಜಿಲ್ಲೆಯಲ್ಲಿ 73,850 ಸಾವಿರ ಡೋಸ್‌ಗಳಷ್ಟು ಲಸಿಕೆ ದಾಸ್ತಾನು ಮಾಡಲಾಗಿದೆ.

ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಏಕಕಾಲದಲ್ಲಿ 170 ಲಸಿಕಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಲಾಗುತ್ತಿದ್ದು, ರಾಜ್ಯ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯಂತೆ ಲಸಿಕೆ ಮೇಳವನ್ನು ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ.

ಜೂ.21ರಿಂದ 18 ವರ್ಷದಿಂದ ೪೪ ವರ್ಷದೊಳಗಿನ ವಯೋಮಾನದವರಿಗೆ ಉಚಿತವಾಗಿ ಲಸಿಕೆ ಹಾಕುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು. ಅದರಂತೆ, ಮೈಸೂರು ನಗರಪಾಲಿಕೆ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪೊಲೀಸರಿಗೆ ರೇಸ್‌ಕೋರ್ಸ್ ಹಿಂಭಾಗ ಇರುವ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಮೈದಾನ, ಶಿಕ್ಷಕರಿಗೆ ಗುರುಭವನ, ರಸ್ತೆಬದಿ ವ್ಯಾಪಾರಿಗಳಿಗೆ ಪುರಭವನ, ನಗರಪಾಲಿಕೆ, ವಾಣಿವಿಲಾಸ ನೀರು ಸರಬರಾಜು ಮಂಡಳಿ, ವಲಯ ಕಚೇರಿ ಸಿಬ್ಬಂದಿಗೆ ವಾಣಿವಿಲಾಸ ಕಚೇರಿಯಲ್ಲಿ, ಇಂಜಿನಿಯರ್‌ಗಳಿಗೆ ವಲಯ ಎರಡು ಮತ್ತು ಆರರ ಕಚೇರಿಯಲ್ಲಿ ಲಸಿಕೆ ಮೇಳ ನಡೆಯಲಿದೆ.

ಸಿದ್ಧಾರ್ಥನಗರದ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಕೃಷ್ಣರಾಜ ಕ್ಷೇತ್ರದ ನಾಗರಿಕರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದು, ಬುಧವಾರದಿಂದ ಏಳು ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವ 2,696ಮಂದಿಗೆ ಲಸಿಕೆ ಹಾಕಲಾಗುತ್ತದೆ.

ಗ್ರಾಮಾಂತರ ಪ್ರದೇಶದಲ್ಲಿ ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಮೇಳ ನಡೆಯಲಿದ್ದು, ಅದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ. ಇದಲ್ಲದೆ, ರೈಲ್ವೆ ಆಸ್ಪತ್ರೆ, ಬೀಡಿ ಕಾರ್ಮಿಕರ ಆಸ್ಪತ್ರೆ, ಮೈಸೂರು ವಿಶ್ವವಿದ್ಯಾನಿಲಯದ ನೌಕರರಿಗೆ ಸೆನೆಟ್ ಭವನ, ಮೈಸೂರು ಜಿಲ್ಲಾ ಫೋಟೋಗ್ರಾಫರ್ಸ್‌ ಮತ್ತು ವಿಡಿಯೋಗ್ರಾಫರ್ಸ್‌ಗಳಿಗೆ ಗಂಗೋತ್ರಿ ಗ್ಲೇಡ್ ಮೈದಾನದಲ್ಲಿ ನಡೆಯಲಿದೆ. ಚಾಮರಾಜ ಕ್ಷೇತ್ರದ ವ್ಯಾಪ್ತಿಯ ಮಹಾರಾಣಿ ಜೂನಿಯರ್ ಕಾಲೇಜು, ಹೆಬ್ಬಾಳು ಸಮದಾಯ ಭವನ ಸೇರಿ ನಾಲ್ಕು ಕಡೆಗಳಲ್ಲಿ ಶಾಸಕ ಎಲ್.ನಾಗೇಂದ್ರ ಅವರ ನೇತೃತ್ವದಲ್ಲಿ ಪ್ರತ್ಯೇಕವಾಗಿ ನಡೆಯಲಿದೆ.

ಕೋವಿಡ್-19 ಲಸಿಕಾ ಮೇಳದ ಪ್ರಯುಕ್ತ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ಹಾಕುವ ಕಾರಣ 73,850 ಸಾವಿರ ಡೋಸ್‌ಗಳ ಲಸಿಕೆ ದಾಸ್ತಾನು ಮಾಡಲಾಗಿದೆ. 16,950 ಸಾವಿರ ಕೊವ್ಯಾಕ್ಸಿನ್, 56,900 ಸಾವಿರ ಕೋವಿಶೀಲ್ಡ್ ಡೋಸ್‌ಗಳು ಲಭ್ಯವಿದ್ದು, ಪ್ರತಿ ತಾಲ್ಲೂಕು ಕೇಂದ್ರಗಳಿಗೆ ಐದು ಸಾವಿರ ಡೋಸ್‌ಗಳನ್ನು ಕಳುಹಿಸಲಾಗಿದೆ. ಮೈಸೂರು ನಗರ ಒಂದರಲ್ಲೇ 35 ರಿಂದ 40 ಸಾವಿರ ಮಂದಿಗೆ ಲಸಿಕೆ ಹಾಕಲು ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿರುವ ಫಲಾನುಭವಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂದಿನಂತೆ ಲಸಿಕೆ ಹಾಕುವ ಕೆಲಸ ನಡೆಯಲಿದೆ.

ಜ. 16 ರಿಂದ ಇದುವರೆಗೆ 10,44,824 ಮಂದಿಗೆ ಲಸಿಕೆ ಹಾಕಲಾಗಿದೆ. ಆರೋಗ್ಯ ಕಾರ್ಯಕರ್ತರಲ್ಲಿ 39,546 ಮಂದಿಗೆ ಮೊದಲನೇ, 27,339 ಮಂದಿಗೆ ಎರಡನೇ ಡೋಸ್, ಫ್ರಂಟ್‌ಲೈನ್ ವಾರಿಯರ್‌ಗಳಲ್ಲಿ 32,270ಮಂದಿಗೆ ಮೊದಲನೇ, 12,917 ಮಂದಿಗೆ ಎರಡನೇ ಡೋಸ್, ರಾಜ್ಯ ಕೊರೊನಾ ವಾರಿಯರ್‌ಗಳಲ್ಲಿ 43,883 ಮಂದಿಗೆ ಮೊದಲನೇ ಡೋಸ್, ಆದ್ಯತಾ ಕ್ಷೇತ್ರದ ಕಾರ್ಯಕರ್ತರಲ್ಲಿ 19,630ಮಂದಿಗೆ ಮೊದಲನೇ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಲ್ಲಿ 2,88,257 ಮಂದಿಗೆ ಮೊದಲನೇ, 85,415 ಮಂದಿಗೆ ಎರಡನೇ ಡೋಸ್, 45 ವರ್ಷ ಮೇಲ್ಪಟ್ಟವರಲ್ಲಿ 3,64,637 ಮಂದಿಗೆ ಮೊದಲನೇ, 43,609 ಮಂದಿಗೆ ಎರಡನೇ ಡೋಸ್, 18ರಿಂದ 44 ವರ್ಷದ ವಯೋಮಾನದವರಲ್ಲಿ 87,295 ಮಂದಿಗೆ ಮೊದಲನೇ ಡೋಸ್ ಸೇರಿದಂತೆ ಇದುವರೆಗೆ ಒಟ್ಟು 10,44,824 ಮಂದಿಗೆ ಲಸಿಕೆ ಹಾಕಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಮೇಳ

ಸರ್ಕಾರಿ ಲಸಿಕಾ ಕೇಂದ್ರಗಳಲ್ಲದೆ, ಏಳು ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕಾ ಮೇಳ ನಡೆಯಲಿದೆ. ಜೆಎಸ್‌ಎಸ್ ಆಸ್ಪತ್ರೆ, ಅಪೋಲೋ ಆಸ್ಪತ್ರೆ, ಕೊಲಂಬಿಯಾ ಏಷಿಯಾ ಅಸ್ಪತ್ರೆ, ನಾರಾಯಣ ಹೃದಯಾಲಯ, ಶಾಂತವೇರಿ ಗೋಪಾಲಗೌಡ ಸ್ಮಾರಕ ಆಸ್ಪತ್ರೆ, ಭಾನವಿ ಆಸ್ಪತ್ರೆ, ಆಶಾಕಿರಣ ಆಸ್ಪತ್ರೆಗಳಲ್ಲಿ ನಡೆಯಲಿದೆ.

ಲಸಿಕಾ ಮೇಳಕ್ಕೆ ಮಾರ್ಗಸೂಚಿ

*45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮೊದಲ ಅದ್ಯತೆ

*2ನೇ ಡೋಸ್‌ಗೆ ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣ

*ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ

*18ರಿಂದ 44 ವರ್ಷ ವಯೋಮಾನದವರ ರಾಜ್ಯ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು

*ಕೊವ್ಯಾಕ್ಸಿನ್ ಲಸಿಕೆಯ ಮೊದಲನೇ ಡೋಸ್ ಲಸಿಕಾಕರಣ

ಮೈಸೂರು ಜಿಲ್ಲೆ

ಕೇಂದ್ರಗಳು 170

ಲಸಿಕೆ ದಾಸ್ತಾನು 73,850 ಡೋಸ್

ಲಸಿಕೆ ಗುರಿ 70,000 ಡೋಸ್

ಜಿಲ್ಲೆ ಕೇಂದ್ರಗಳು ದಾಸ್ತಾನು ಗುರಿ

× Chat with us