ದಂಪತಿ ಮಡಿಲಿಗೆ ಮಂಡ್ಯ ಜಿಲ್ಲಾ ಪಂಚಾಯಿತಿ ಆಡಳಿತ

ಮಂಡ್ಯ: ಜಿಲ್ಲಾ ಪಂಚಾಯಿತಿಯ ಆಡಳಿತವು ಆಡಳಿತಾಧಿಕಾರಿ ಡಾ. ವಿ.ರಾಮ್‌ಪ್ರಸಾತ್ ಮನೋಹರ್ ಹಾಗೂ ದಿವ್ಯಾ ಪ್ರಭು ದಂಪತಿಯ ಹೆಗಲಿಗೇರಿದೆ.

ಮಂಡ್ಯ ಜಿ.ಪಂ. ಸಿಇಒ ಜಿ.ಆರ್.ಜೆ.ದಿವ್ಯಾ ಪ್ರಭು ಮತ್ತು ನೂತನ ಆಡಳಿತಾಧಿಕಾರಿ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಇಬ್ಬರೂ ದಂಪತಿ. ಏ.೩೦ರಂದು ಜಿ.ಪಂ. ಸಿಇಒ ಆಗಿ 2014ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಜಿ.ಆರ್.ಜೆ.ದಿವ್ಯಾ ಪ್ರಭು ವರ್ಗಾವಣೆಯಾಗಿ ಬಂದಿದ್ದರು. ಇದೀಗ ಅವರ ಪತಿ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಅವರನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಿ.ಪಂ. ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.

ಈವರೆಗೆ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದರು. ಈ ಮಧ್ಯೆ ಜು.1ರಂದು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಅವರನ್ನು ರಾಜ್ಯ ಸರ್ಕಾರವು ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಿಸಿತ್ತು. ಜತೆಗೆ, ಆಯಾ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳಿಗೆ ಅವಧಿ ಮುಗಿದಿರುವ ಜಿ.ಪಂ.ಗಳ ಆಡಳಿತಾಧಿಕಾರಿ ಜವಾಬ್ದಾರಿ ನೀಡಿದೆ.

ಈ ಹಿನ್ನೆಲೆಯಲ್ಲಿ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಅವರು ಸೋಮವಾರ ನಗರದ ಜಿ.ಪಂ. ಕಚೇರಿಗೆ ಆಗಮಿಸಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎರಡು ತಿಂಗಳ ಅಂತರದಲ್ಲೇ ದಂಪತಿಗೆ ಒಂದೇ ಸ್ಥಳದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದರೊಂದಿಗೆ ಐಎಎಸ್ ಅಕಾರಿಗಳಾದ ಪತಿ-ಪತ್ನಿ ಇಬ್ಬರೂ ಜಿಲ್ಲೆಯ ಒಂದೇ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶ ದೊರೆತಿರುವ ವಿಶೇಷ ಪ್ರಕರಣ ಇದಾಗಿದೆ.

× Chat with us