ರೈತರ ʻಭಾರತ್‌ ಬಂದ್‌ʼಗೆ ಕಾಂಗ್ರೆಸ್‌ ಬೆಂಬಲ

ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಡಿಸೆಂಬರ್‌ 8ಕ್ಕೆ ʻಭಾರತ್‌ ಬಂದ್‌ʼಗೆ ಕರೆ ನೀಡಿದ್ದು, ಇದಕ್ಕೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ಸೂಚಿಸಿದೆ.

ರೈತ ಸಮುದಾಯದವರು ನವೆಂಬರ್‌ 26ರಿಂದಲೂ ಹೊಸದಿಲ್ಲಿಯ ಗಡಿ ಭಾಗಗಳಲ್ಲಿ ಜಮಾವಣೆಗೊಂಡು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಡಿಸೆಂಬರ್‌ 8 ರಂದು ಭಾರತ್‌ ಬಂದ್‌ಗೆ ಕರೆ ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ ವಕ್ತಾರ ಪವನ್‌ ಖೇರ ಸುದ್ದಿಗಾರರೊಂದಿಗೆ ಮಾತನಾಡಿ, ಇದೇ ಡಿಸೆಂಬರ್‌ 8 ರಂದು ನಡೆಯುವ ಭಾರತ್‌ ಬಂದ್‌ಗೆ ಕಾಂಗ್ರೆಸ್‌ ಬೆಂಬಲ ವ್ಯಕ್ತಪಡಿಸಲಿದೆʼ ಎಂದು ತಿಳಿಸಿದ್ದಾರೆ.

ʻಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಈ ಹಿಂದೆ ಟ್ರ್ಯಾಕ್ಟರ್‌ ರ‍್ಯಾಲಿ, ಸಹಿ ಸಂಗ್ರಹ ಅಭಿಯಾನ, ಕಿಸಾನ್‌ ರ‍್ಯಾಲಿಗಳಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಪಕ್ಷ ರೈತ ಪರವಾಗಿ ದನಿಎತ್ತಿದ್ದಾರೆ. ನಮ್ಮ ಎಲ್ಲ ಜಿಲ್ಲಾ ಪ್ರಧಾನ ಕಚೇರಿಗಳು ಹಾಗೂ ಪ್ರದೇಶ ಕಚೇರಿಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆʼ ಎಂದು ಖೇರ ಹೇಳಿದರು.

ಸರ್ಕಾರದ ಹೊಸ ಕೃಷಿ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿದ ಖೇರ ಅವರು, ಶಾಸನಗಳನ್ನು ಜಾರಿಗೊಳಿಸಲು ಆತುರವೇಕೆ ಎಂದು ಪ್ರಶ್ನಿಸಿದರು.

× Chat with us