ಮಾರ್ವಾಡಿ ಸಂಸ್ಥೆಯಂತೆ ಮುಡಾ ವರ್ತನೆ: ಎಂ.ಲಕ್ಷ್ಮಣ್‌ ವಾಗ್ದಾಳಿ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾರ್ವಾಡಿ ಸಂಸ್ಥೆಯಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾರ್ವಾಡಿ ಸಂಸ್ಥೆಯಂತೆ ವರ್ತಿಸುತ್ತಿದೆ. ಕಾರ್ನರ್‌ ನಿವೇಶನಗಳನ್ನು ಮಾಡಿ ಕೋಟ್ಯಂತರ ದುಡ್ಡನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ. ಸರ್ವೇ ನಂ. 4 ವಿಚಾರದಲ್ಲಿ ಖಾತೆ ಕಂದಾಯ ಮಾಡಿಕೊಡುವಂತೆ ಹೈಕೋರ್ಟ್‌ ಸ್ಪಷ್ಟ ತೀರ್ಪು ನೀಡಿದ್ದರೂ, ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅದು ಸರ್ಕಾರಿ ಜಮೀನು ಎಂದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಮುಡಾ ವಿಚಾರದಲ್ಲಿ ಮುಡಾ ವಿರುದ್ಧವೇ ವಾದ ಮಾಡಲು ವಕೀಲರೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ. 40 ಲಕ್ಷ ಕೊಟ್ಟು ವಾದ ಮಾಡಿಸುತ್ತಿದ್ದಾರೆ. ಅದು ಯಾರ ದುಡ್ಡು? ಸರ್ಕಾರ ಅದನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಮುಖಂಡರ ಆರೋಪಗಳ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಬ್ರೈನ್‌ ಡೆಡ್‌ ಸರ್ಕಾರವಿದ್ದು, ಕೆಲವು ಅಂಗಾಂಗಗಳು ವೆಂಟಿಲೇಟರ್‌ ಮೂಲಕ ಕೆಲಸ ಮಾಡುತ್ತಿವೆ. ಆ ವೆಂಟಿಲೇಟರ್‌ ಯಡಿಯೂರಪ್ಪನವರು. ಅವರನ್ನು ತೆಗೆದರೆ ರೋಗಿ ಸತ್ತ ಎನ್ನುವಂತಹ ಪರಿಸ್ಥಿತಿ ಕರ್ನಾಟಕದಲ್ಲಿದೆ. ರಾಜ್ಯದ ಮಾನ ಮರ್ಯಾದೆಯನ್ನು ಬಿಜೆಪಿ ಶಾಸಕರು ಹರಾಜಾಕುತ್ತಿದ್ದಾರೆ ಎಂದು ಟೀಕಿಸಿದರು.

ಇದು ನಮ್ಮ ಆಪಾದನೆ ಅಲ್ಲ. ಬಿಜೆಪಿಯ ಪ್ರಮುಖರೇ ತಮ್ಮ ಪಕ್ಷದ ನಾಯಕರ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಜಲ ಸಂಪನ್ಮೂಲ ಇಲಾಖೆಯಡಿ ನಿಗಮಗಳಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪವನ್ನು ಬಿಜೆಪಿಯ ಎಚ್‌.ವಿಶ್ವನಾಥ್‌ ಮಾಡಿದ್ದಾರೆ. ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪಾಲನೆಯಾಗದೇ ರಾಜ್ಯ ಸರ್ಕಾರ 21,764 ಕೋಟಿ ರೂ. ಪೈಕಿ 4 ಸಾವಿರ ಕೋಟಿ ರೂ. ಅನ್ನು ನೇರವಾಗಿ ಕೊಟ್ಟುಬಿಟ್ಟಿದೆ. ಶೇ 10 ಕಮಿಷನ್‌ ಅನ್ನು ಸರ್ಕಾರ ತೆಗೆದುಕೊಂಡಿದೆ. ಹಿಂದೆ ಮೋದಿ ಅವರು ಶೇ. 10 ಸರ್ಕಾರ ಎಂದು ಟೀಕಿಸಿದ್ದರು. ಈಗ ತಮ್ಮದೇ ಪಕ್ಷದ ಭ್ರಷ್ಟಾಚಾರದ ಬಗ್ಗೆ ತಮ್ಮವರೇ ಮಾಡಿರುವ ಆರೋಪಗಳಿಗೆ ಉತ್ತರ ಕೊಡಬೇಕು ಮೋದಿ ಅವರು. 1.80 ಸಾವಿರ ಕೋಟಿ ರೂ. ಅನ್ನು ಸಿಎಂ ಯಡಿಯೂರಪ್ಪ ಅವರು ಸಾಲ ಮಾಡಿದ್ದಾರೆ. ರಾಜ್ಯದಲ್ಲೇ ಇದು ಇತಿಹಾಸ. ಇದು ಲೂಟಿಕೋರ, ಲಜ್ಜೆಗೆಟ್ಟ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

× Chat with us