ನಳಿನ್ ಕುಮಾರ್ ಕಟೀಲು ಓರ್ವ ಭಯೋತ್ಪಾದಕ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಬಡ್ತಿ ನೀಡುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ನಳಿನ್ ಕುಮಾರ್ ಕಟೀಲು ಓರ್ವ ಭಯೋತ್ಪಾದಕ. ನಳಿನ್ ಕುಮಾರ್ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಚಿತ್ರದುರ್ಗದಲ್ಲಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮುಂದಿನ ವಿಧಾನಸಭೆ ಎಲೆಕ್ಷನ್‌ನಲ್ಲಿ 140 ಸ್ಥಾನ ಗೆಲ್ಲುತ್ತೇವೆ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಕೂಡ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 140 ಸ್ಥಾನ ಗೆಲ್ಲಲು ಮತಗಳು ಏನು ಅವರ ಜೇಬಿನಲ್ಲಿ ಇದ್ಯಾ? ರಾಜ್ಯದ ಜನರು ಬಿಜೆಪಿ ಕಿತ್ತೊಗೆಯಲು ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಜೆಡಿಎಸ್ ಯಾವ ಪಕ್ಷದ ಬಿ ಟೀಂ ಅಲ್ಲ ಎಂಬ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪರಿಷತ್ ಚುನಾವಣೆಗೆ ಹಲವು ಕಡೆ ಅಭ್ಯರ್ಥಿ ಹಾಕಿಲ್ಲ. ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿಲ್ಲ. 6 ಕಡೆ ಮಾತ್ರ ಜೆಡಿಎಸ್ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದಾರೆ. ಇನ್ನುಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೆ? ಎಂದು ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಭಯೋತ್ಪಾದನೆಗೆ ಬಡ್ತಿ ನೀಡುತ್ತಿದೆ ಎಂಬ ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಅವನು ಅಸಂಬದ್ಧ ವಿಚಾರ ಹೇಳ್ತಾನೆ. ಬಿಜೆಪಿಯಲ್ಲಿ ಕೆಲವರು ಅನಗತ್ಯ ಗೊಂದಲ ಸೃಷ್ಟಿಸುವವರಿದ್ದಾರೆ. ಬಿಜೆಪಿಯಲ್ಲಿ ಗೊಂದಲವಿದೆ, ನಮ್ಮ ಪಕ್ಷದಲ್ಲಿ ಗೊಂದಲವಿಲ್ಲ ಎಂದು ಏಕವಚನದಲ್ಲಿ ನಳಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಹಾವೇರಿಯಲ್ಲಿ ಸಲೀಂ ಅಹ್ಮದ್​ ಕೂಡ ಗರಂ ಆಗಿದ್ದಾರೆ. ಕಟೀಲು ಮಾನಸಿಕ ಸಮತೋಲನವನ್ನ ಕಳೆದುಕೊಂಡಿದ್ದಾರೆ. ಕಟೀಲು ಆಡಿದ ಮಾತುಗಳು ಅವರ ವ್ಯಕ್ತಿತ್ವ ತೋರಿಸುತ್ತಿದೆ. ಇಂದಿರಾ ಗಾಂಧಿ ದೇಶದ ಐಕ್ಯತೆಗಾಗಿ ಪ್ರಾಣ ಕೊಟ್ಟಿದ್ದಾರೆ. ಈ ಎಲ್ಲ ವಿಚಾರ ನಳಿನ್​ ಕುಮಾರ್​ ಕಟೀಲುರಿಗೆ ಗೊತ್ತಿಲ್ಲ. ಕಟೀಲು ಅವರ ಈ ಮಾತುಗಳನ್ನು ನಾನು ಖಂಡಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್​ ವಾಗ್ದಾಳಿ ನಡೆಸಿದ್ದಾರೆ.

× Chat with us