ತವರಲ್ಲಿ ಸಿದ್ದು ಬೆನ್ನಿಗೆ ನಿಂತ ಮತದಾರ, ʻಕೈʼಗೆ ಬಲ… ಅಡಗಿದ ಬಿಜೆಪಿ ಜಂಘಾಬಲ

ಮೈಸೂರು: ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಮೈಕೊಡವಿ ಎದ್ದುನಿಂತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರಲ್ಲಿ ಕಾಂಗ್ರೆಸ್‌ ಚೇತರಿಸಿಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್‌ಗೆ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಶಕ್ತಿ ನೀಡಿದ್ದು, ಇದು ಮುಂದಿನ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಿಸಲು ಉತ್ತೇಜನ ಬಂದಂತಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಗ್ರಾಮ ಜನಾಧಿಕಾರ ಸಮಾವೇಶದ ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಭರ್ಜರಿ ಪ್ರಚಾರದ ರಣತಂತ್ರಕ್ಕೆ ಉತ್ತಮ ಫಲಿತಾಂಶವೇ ದೊರಕಿದೆ. ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಿರುವ ಜಾ.ದಳ ನಂತರದಲ್ಲಿ ಸ್ಥಾನ ಕಾಯ್ದುಕೊಂಡರೆ, ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಗ್ರಾಮೀಣ ಮತದಾರರನ್ನು ಮೋಡಿ ಮಾಡಲು ಯತ್ನಿಸಿದ್ದ ಬಿಜೆಪಿ ಪ್ರಯತ್ನ ವಿಫಲವಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಜಿಲ್ಲೆಯಲ್ಲಿ 250 ಗ್ರಾಮ ಪಂಚಾಯಿತಿಗಳಿಗೆ ಡಿ.22 ಮತ್ತು 27ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. 205 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರೆ, 19 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿತ್ತು. ಉಳಿದ 5,069 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಮೊದಲ ಸ್ಥಾನದ ಲ್ಲಿದ್ದರೆ, ಜಾ.ದಳ ಬೆಂಬಲಿತರು ಎರಡನೇ ಹಾಗೂ ಬಿಜೆಪಿ ಬೆಂಬಲಿತರು ಮೂರನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಹೇಳುವಂತೆ 2,400 ಸದಸ್ಯರು, ಜಾ.ದಳದ ಬೆಂಬಲಿತರು 1,600, ಬಿಜೆಪಿ ಬೆಂಬಲಿತರು 960 ಸ್ಥಾನಗಳನ್ನು ಪಡೆದಿದ್ದರೆ, ಜಾ.ದಳ ತಮ್ಮದೇ ಆದ ವಿಶ್ಲೇಷಣೆಯಲ್ಲಿ 2 ಸಾವಿರ ಸದಸ್ಯರು ಗೆದ್ದಿದ್ದೇವೆಂದು ಪ್ರತಿಪಾದಿಸಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ನಮ್ಮದೇ ಮೊದಲು ಅನ್ನುವ ಮಾತು ಬಿಟ್ಟು ಕಳೆದ ಸಲಕ್ಕಿಂತ ಈ ಬಾರಿ ಹೆಚ್ಚು ಸೀಟು ಗೆದ್ದಿದ್ದೇವೆಂದು ಹೇಳಿ ತೃಪ್ತಿಪಟ್ಟುಕೊಂಡಿದ್ದಾರೆ.

ಕಾಂಗ್ರೆಸ್ ಮೇಲುಗೈ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವುದು ಕಾಂಗ್ರೆಸ್ ವಲಯದಲ್ಲಿ ಹರ್ಷವನ್ನು ಉಂಟು ಮಾಡಿದೆ. ‘ಗ್ರಾಮ ಜನಾಧಿಕಾರ’ ಸಮಾವೇಶದ ಜತೆಗೆ ಸಿದ್ದರಾಮಯ್ಯ ಅವರ ಪ್ರಚಾರ ಸಾಕಷ್ಟು ಪ್ರಭಾವ ಬೀರಿದೆ. ಚಾಮುಂಡೇಶ್ವರಿ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣ ಅಹಿಂದ ವರ್ಗದ ಮತದಾರರನ್ನು ಕ್ರೋಢಿಕರಿಸುವ ಜತೆಗೆ ಕಾಂಗ್ರೆಸ್ಸಿನ ಶಾಸಕರು-ಮಾಜಿ ಶಾಸಕರ ಸಂಘಟಿತ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಎರಡು ಸಾವಿರ ಸದಸ್ಯರ ಸಂಖ್ಯೆಯ ಗೆಲುವನ್ನು ದಾಟಿದೆ. ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ತಿ.ನರಸೀಪುರ, ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್- ಜಾ.ದಳದ ನಡುವೆ ನೇರ ಹಣಾಹಣಿ ನಡೆದಿದ್ದರೂ ಕಾಂಗ್ರೆಸ್‌ಗೆ ಹೆಚ್ಚಿನ ಸದಸ್ಯರ ಗೆಲುವು ದೊರೆತಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಾ.ದಳ ಬೆಂಬಲಿತರ ಪರವಾಗಿ ಪ್ರಚಾರ ಮಾಡಬೇಕಿದ್ದ ಶಾಸಕ ಜಿ.ಟಿ.ದೇವೇಗೌಡರು ತಟಸ್ಥವಾಗಿ ಉಳಿದರೂ ತಮ್ಮ ಬೆಂಬಲಿತರ ಪರ ಒಳಗೊಳಗೆ ಬೆಂಬಲ ಸೂಚಿಸಿದ್ದರು. ಆದರೆ, ಈ ವಿಚಾರದಲ್ಲಿ ಮತದಾರರಿಗೆ ಸ್ಪಷ್ಟ ಸಂದೇಶ ಕೊಡಲು ಸಾಧ್ಯವಾಗದಿರುವ ಕಾರಣ ಕಾಂಗ್ರೆಸ್‌ಗೆ ಅನುಕೂಲವಾದರೆ, ಜಾ.ದಳ ಬೆಂಬಲಿತರ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವರುಣ, ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ ನಡೆದಿದ್ದರಿಂದ ಸಮಬಲದ ಸ್ಥಾನಗಳು ದೊರೆತಿವೆ. ಈ ಎರಡು ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಸಂಸದ ವಿ.ಶ್ರೀನಿವಾಸಪ್ರಸಾದ್, ಶಾಸಕ ಬಿ.ಹರ್ಷವರ್ಧನ್ ಅವರ ಬೆಂಬಲದಿಂದ ಬಿಜೆಪಿ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿರುವುದು ಗಮನಾರ್ಹವಾಗಿದೆ.

ನಡೆಯದ ಬಿಜೆಪಿ ತಂತ್ರಗಾರಿಕೆ

ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಗ್ರಾಮೀಣ ಮತದಾರರನ್ನು ಮೋಡಿ ಮಾಡಲು ಯತ್ನಿಸಿದ್ದ ಬಿಜೆಪಿ ತಂತ್ರಗಾರಿಕೆ ಕಾಂಗ್ರೆಸ್-ಜಾ.ದಳ ಭದ್ರಕೋಟೆಯ ಮುಂದೆ ನಡೆಯ ದಂತಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಇದ್ದರೂ ಸಹ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿಯಲು ಸಾಧ್ಯವಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್ ಪಡೆದಿದ್ದ ಬಿಜೆಪಿ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಮತದಾರರನ್ನು ಸೆಳೆಯುವಲ್ಲಿ ಸಾಧ್ಯವಾಗಿಲ್ಲ. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಕೆ.ಆರ್.ನಗರ, ನಂಜನಗೂಡು ತಾಲ್ಲೂಕಿನಲ್ಲಿ ಗ್ರಾಮ ಸ್ವರಾಜ್ ಸಮಾವೇಶ ನಡೆಸುವ ಮೂಲಕ ಮತದಾರರನ್ನು ಮೋಡಿ ಮಾಡುವ ಮಾತುಗಳನ್ನಾಡಲಾಗಿತ್ತು. ಆದರೆ, ಮತದಾರರು ಮಾತ್ರ ಯಾವ ಮಾತಿಗೂ ಮನ್ನಣೆ ನೀಡದೆ ಹೋಗಿದ್ದರಿಂದ ಬಿಜೆಪಿ ಕಳೆದ ಚುನಾವಣೆಗೆ ಹೋಲಿಸಿದರೆ ಒಂದಿಷ್ಟು ಸ್ಥಾನಗಳನ್ನು ಹೆಚ್ಚಾಗಿ ಪಡೆಯಲು ಶಕ್ತವಾಗಿದೆ ಹೊರತು ಮೇಲುಗೈ ಸಾಧಿಸುವಲ್ಲಿ ವಿಫಲವಾಗಿದೆ.

-ಕೆ.ಬಿ.ರಮೇಶನಾಯಕ

× Chat with us