ಮೇಯರ್‌ ಚುನಾವಣೆ: ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಮೈತ್ರಿ ಮುಂದುವರಿಕೆಗೆ ಗ್ರೀನ್‌ ಸಿಗ್ನಲ್

ಮೈಸೂರು: ಮೈಸೂರು ಮಹಾನಗರಪಾಲಿಕೆಯ ಮೇಯರ್‌-ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರಿಸಿ, ಅಧಿಕಾರ ಹಂಚಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದ್ದು, ಮೈತ್ರಿ ಕುರಿತ ಸಂಪೂರ್ಣ ಜವಾಬ್ದಾರಿಯನ್ನು ಶಾಸಕ ತನ್ವೀರ್‌ಸೇಠ್ ಹೆಗಲಿಗೆ ವಹಿಸಲಾಗಿದೆ.

ಸ್ಥಳೀಯವಾಗಿ ಜೆಡಿಎಸ್‌ನೊಂದಿಗೆ ಆಗಿರುವ ಒಪ್ಪಂದದಂತೆ ಮೈತ್ರಿ ಮುಂದುವರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿದ್ದು, ಜೆಡಿಎಸ್‌ ನಾಯಕರು ಕೈಗೊಳ್ಳುವ ತೀರ್ಮಾನದ ಮೇಲೆ ಮೈತ್ರಿ ಸ್ವರೂಪ ಅಂತಿಮವಾಗಲಿದೆ.

ತೊಣಚಿಕೊಪ್ಪಲಿನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಶಾಸಕರು, ಪ್ರಮುಖರು ಹಾಗೂ ನಗರ ಪಾಲಿಕೆ ಸದಸ್ಯರ ಸಭೆಯಲ್ಲಿ ನಗರಪಾಲಿಕೆ ಮೇಯರ್‌ ಚುನಾವಣೆ ಹಾಗೂ ಮೈತ್ರಿ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಶಾಸಕ ತನ್ವೀರ್‌ಸೇಠ್ ಅವರು ಜಾತ್ಯತೀತ ತತ್ವ, ಸಿದ್ಧಾಂತದ ಆಧಾರದ ಮೇಲೆ ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರಿಸಿಕೊಂಡು ಹೋಗೋಣ. ಐದು ವರ್ಷಕ್ಕೆ ಆಗಿರುವ ಒಪ್ಪಂದವನ್ನು ಮುಂದುವರಿಸುವ ಬಗ್ಗೆ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಅವರ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಈ ವೇಳೆ ನಗರಪಾಲಿಕೆ ಸದಸ್ಯರು ಜೆಡಿಎಸ್‌ ನಾಯಕರೊಂದಿಗೆ ಉತ್ತಮ ಬಾಂಧವ್ಯ ಇರುವಂತೆ ನೋಡಿಕೊಳ್ಳಬೇಕು. ನಾವು ಅಧಿಕಾರ ಹಂಚಿಕೊಂಡು ಒಟ್ಟಿಗೆ ಹೋಗುವಾಗ ಕೆಲವು ವಿಚಾರಗಳನ್ನು ವೈಯಕ್ತಿಕವಾಗಿ ತಗೆದುಕೊಳ್ಳಬಾರದು ಎಂದರು.

ಎಲ್ಲ ವಿಚಾರಗಳನ್ನೂ ಆಲಿಸಿದ ಸಿದ್ದರಾಮಯ್ಯ ಅವರು ಸ್ಥಳೀಯವಾಗಿ ಒಪ್ಪಂದ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳಿ. ಆರಂಭದಲ್ಲಿ ಆಗಿರುವ ಒಪ್ಪಂದದಂತೆ ಮೇಯರ್‌ ಸ್ಥಾನವನ್ನು ಪಡೆಯಬೇಕು. ಉಳಿದ ಎರಡು ಅವಧಿಗೆ ಜೆಡಿಎಸ್‌ಗೆ ಮೇಯರ್‌ ಸ್ಥಾನವನ್ನು ಬಿಟ್ಟು ಕೊಡುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎನ್ನುವ ಮೂಲಕ ಮೈತ್ರಿಗೆ ಸಮ್ಮತಿಸಿದರು.

ತನ್ವೀರ್ ಸೇಠ್ ಹೆಗಲಿಗೆ ಹೊಣೆ: ನಗರಪಾಲಿಕೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾತುಕತೆ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಶಾಸಕ ತನ್ವೀರ್ ಸೇಠ್‌ಗೆ ವಹಿಸಲಾಗಿದೆ. ಶಾಸಕ ಸಾ.ರಾ.ಮಹೇಶ್ ಅವರನ್ನು ಪಕ್ಷದ ಪ್ರಮುಖರ ಜತೆ ಭೇಟಿ ಮಾಡಿಸಿ, ಅಧಿಕೃತವಾಗಿ ಚರ್ಚಿಸಿ ಮೈತ್ರಿಯನ್ನು ಮುಂದುವರಿಸುವ ಖಚಿತ ತೀರ್ಮಾನ, ಅಧಿಕಾರ ಹಂಚಿಕೆ ಮಾತುಕತೆ ಎಲ್ಲ ವಿಚಾರದಲ್ಲೂ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಅವರಿಗೆ ನೀಡಲಾಗಿದೆ.

ಮೂವರು ಆಕಾಂಕ್ಷಿಗಳು: ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಮೂವರು ಆಕಾಂಕ್ಷಿಗಳಿದ್ದು, ೩೨ನೇ ವಾರ್ಡಿನ ಸದಸ್ಯೆ ಶಾಂತಕುಮಾರಿ, ೩೪ನೇ ವಾರ್ಡಿನ ಸದಸ್ಯೆ ಹಾಜೀರಾ ಸೀಮಾ, ೬೧ನೇ ವಾರ್ಡಿನ ಶೋಭಾ ಸುನಿಲ್ ಆಕಾಂಕ್ಷಿಗಳಾಗಿದ್ದಾರೆ.

ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮಾಜಿ ಮೇಯರ್‌ ಆರೀಫ್ ಹುಸೇನ್, ಅಯೂಬ್‌ಖಾನ್, ಉಪಮೇಯರ್‌ ಸಿ.ಶ್ರೀಧರ್, ನಗರಪಾಲಿಕೆ ಸದಸ್ಯರು ಹಾಜರಿದ್ದರು.

× Chat with us