ಚಾಮರಾಜನಗರ: ತೈಲ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಸೈಕಲ್ ಜಾಥಾ

ಚಾಮರಾಜನಗರ: ಪೆಟ್ರೋಲ್, ಡೀಸೇಲ್ ಹಾಗೂ ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಗುರುವಾರ ಚಾಮರಾಜನಗರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು‌.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಕಾಂಗ್ರೆಸ್ ಮುಖಂಡ ಎನ್.ಚೆಲುವರಾಯಸ್ವಾಮಿ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಡಳಿತ ಭವನದೆದುರು ಸೈಕಲ್ ಜಾಥಾ ನಡೆಸಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ಆರ್.ಧ್ರುವನಾರಾಯಣ ಮಾತನಾಡಿ, ಯುಪಿಎ ಸರ್ಕಾರದ ಸಮಯಕ್ಕಿಂತ ಈಗಲೇ ಪ್ರತಿ ಬ್ಯಾರೆಲ್‌ಗೆ ಕಡಿಮೆ ಬೆಲೆ ಇದ್ದರೂ ಹತ್ತಾರು ಪಟ್ಟು ಹೆಚ್ಚು ದುಡ್ಡು ಕೊಟ್ಟು ಇಂಧನ ಖರೀದಿಸಬೇಕಿದೆ ಎಂದು ಕಿಡಿಕಾರಿದರು.

ವಿಶ್ವದಲ್ಲಿ ಪೆಟ್ರೋಲ್ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶ ಭಾರತವಾಗಿದೆ. ಪ್ರಸ್ತುತ ದಿನಗಳಲ್ಲಿ ಪೆಟ್ರೋಲ್ ದರ ಕೇವಲ 35 ರೂ.ಗೆ ಸಿಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅತಿ ಹೆಚ್ಚು ತೆರಿಗೆ ಹಾಕುತ್ತಿರುವುದರಿಂದ ಪ್ರತಿ ಲೀಟರ್ ಈಗ ನೂರು ರೂ.ಗಳಿಗಿಂತ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಜನರ ಸಮಸ್ಯೆಗೆ ಸ್ಪಂಧಿಸಿ ಕೂಡಲೇ ಪೆಟ್ರೋಲ್ ಮೇಲಿನ ತೆರಿಗೆಯನ್ನು ಸಂಪೂರ್ಣ ಕಡಿಮೆ ಮಾಡಬೇಕು. ಪ್ರತಿ ಲೀಟರ್ ಪೆಟ್ರೋಲ್‌ಗೆ 50 ರೂ. ನಿಗದಿಯಾಗಬೇಕು ಎಂದು ಆಗ್ರಹಿಸಿದರು.

ಕೋವಿಡ್‌ ರೂಲ್ಸ್‌ ಮಾಯ!

ನೂರಾರು ಮಂದಿ ಕಾರ್ಯಕರ್ತರು ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕೋವಿಡ್ ರೂಲ್ಸ್ ಮಾಯವಾಗಿತ್ತು. ಕಾಂಗ್ರೆಸ್ ನಾಯಕರು, ಮುಖಂಡರು ಕೂಡ ಸಾರ್ವಜನಿಕ ಅಂತರ ಪಾಠ ಮಾಡುವುದನ್ನು ಮರೆತರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿನ ಸಭಾ ಕಾರ್ಯಕ್ರಮದಲ್ಲೂ ಕೊರೊನಾ ರೂಲ್ಸ್‌ ಇಲ್ಲವಾಗಿತ್ತು. ಕೊರೊನಾ ರೂಲ್ಸ್ ಬ್ರೇಕ್ ಆಗಿದ್ದರೂ ಕೂಡ ಪೊಲೀಸರು ಜಾಣ ಕುರುಡು ಪ್ರದರ್ಶಿಸಿದರು.

× Chat with us