ಯಾವುದೇ ಆತಂಕವಿಲ್ಲದೇ ಶಾಲೆಗೆ ಬನ್ನಿ: ವಿದ್ಯಾರ್ಥಿಗಳಿಗೆ ಸಿಎಂ ಧೈರ್ಯ

ಬೆಂಗಳೂರು: ರಾಜ್ಯದಲ್ಲಿ 9ರಿಂದ ದ್ವಿತೀಯ ಪಿಯುಸಿವರೆಗೆ ತರಗತಿಗಳು ಸೋಮವಾರದಿಂದ ಆರಂಭವಾಗಲಿದ್ದು, ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಶಾಲೆಗೆ ಬರಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧೈರ್ಯ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳ ಆರಂಭಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆ ಆರಂಭದ ದಿನ ಕೆಲವು ಶಾಲೆಗಳಿಗೆ ಸಚಿವರಾದ ಬಿ.ಸಿ.ನಾಗೇಶ್‌ ಜೊತೆ ನಾನೂ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ. ಶಾಲಾ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. ಅಂತರ ಕಾಯ್ದುಕೊಂಡು ತರಗತಿಗಳನ್ನು ನಡೆಸಲಾಗುವುದು. ದಿನ ಬಿಟ್ಟು ದಿನದಂತೆ ಬ್ಯಾಚ್​ಗಳನ್ನು ಮಾಡಿ ಶಾಲೆ ನಡೆಸಲಾಗುತ್ತದೆ. ಪೋಷಕರ ಸಮ್ಮತಿ ಪಡೆದೇ ಮಕ್ಕಳು ಶಾಲೆಗೆ ಬರಬೇಕು. ಎಲ್ಲ ಪೋಷಕರು ಕೂಡ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಒಂದೂವರೆ ವರ್ಷದಿಂದ ವಿದ್ಯಾರ್ಥಿಗಳಿಗೆ ಶಾಲೆ ಇರಲಿಲ್ಲ. ಹೀಗಾಗಿ, ಹಂತಹಂತವಾಗಿ ಶಾಲೆಗೆ ವಿದ್ಯಾರ್ಥಿಗಳು ಬರಬೇಕು ಎಂಬುದು ನಮ್ಮ ಉದ್ದೇಶ. ಪೋಷಕರು ಸಹ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಎಂದರು.

× Chat with us