ಕೊಲಂಬಿಯಾದಲ್ಲಿ ಕಣ್ಮನ ಸೆಳೆದ ವರ್ಣಮಯ ಪುಷ್ಪ ಪಥಸಂಚಲನ

ಮೆಡ್ಲಿನ್: ಕೊಲಂಬಿಯಾದಲ್ಲಿ ನಡೆಯುವ ಪುಷ್ಪೋತ್ಸವ ವಿಶ್ವವಿಖ್ಯಾತ. ದೇಶದ ಪುಷ್ಪೋದ್ಯಮಿಗಳು ಮೆಡ್ಲಿನ್ ನಗರಕ್ಕೆ ಧಾವಿಸಿ ಹೂವಿನ ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಾರೆ. ಕಣ್ಮನ ಸೆಳೆಯುವ ಫ್ಲವರ್ ಪೆರೇಡ್ ನೋಡುಗರನ್ನು ಮುದಗೊಳಿಸುತ್ತದೆ.

ಕೊಲಂಬಿಯಾದ ಮೆಡ್ಲಿನ್ ನಗರದ ಕ್ರೀಡಾಂಗಣ ಸಂಪೂರ್ಣ ಪುಷ್ಪಮಯವಾಗಿತ್ತು. ನೂರಾರು ಪುಷ್ಪೋದ್ಯಮಿಗಳು ನಗರಕ್ಕೆ ಧಾವಿಸಿ ಹೂವಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇಡೀ ಸ್ಟೇಡಿಯಂ ವಿಕಸಿತ ಸುಮಗಳಿಂದ ನಳನಳಿಸುತ್ತಿತ್ತು. ಪುಷ್ಪ ವಿನ್ಯಾಸವನ್ನು ಸ್ಥಳೀಯವಾಗಿ ಸಿಲ್ಲೆಟಾಸ್ ಎಂದು ಕರೆಯಲಾಗುತ್ತದೆ. ಪುಷ್ಪ ಕಲಾಕಾರರು ಮತ್ತು ಪುಷ್ಪಾಭಿಮಾನಿಗಳು ಕ್ರೀಡಾಂಗಣದಲ್ಲಿ ವರ್ಣರಂಜಿತ ಮೆರವಣಿಗೆ ನಡೆಸಿದರು.

ಫ್ಲವರ್ ಪೆರೇಡ್‌ನಲ್ಲೂ ಕೊರೊನಾ ಪಿಡುಗಿನ ಸಂದೇಶವನ್ನು ಬಿಂಬಿಸಲಾಯಿತು. ಕೋವಿಡ್‌ನಿಂದಾಗಿ ಕಳೆದ ವರ್ಷ ಪುಷ್ಪ ಪಥಸಂಚಲನ ನಡೆಯಲಿಲ್ಲ. ವಾರ್ಷಿಕ ಫ್ಲವರ್ ಪೆರೇಡ್ ೧೯೫೭ರಿಂದಲೂ ನಡೆಯುತ್ತಿದ್ದು, ವಿಶ್ವವಿಖ್ಯಾತಿ ಪಡೆದಿದೆ. ಬಣ್ಣ ಬಣ್ಣದ ಹೂವುಗಳನ್ನು ಸಿಂಗರಿಸಿ ಅವುಗಳನ್ನು ನಗರದಲ್ಲಿ ಪ್ರದರ್ಶಿಸಲು ಆಗಮಿಸುವಂತೆ ಮೆಡಲಿನ್ ನಗರದ ಸ್ಥಳೀಯರು ಸುತ್ತಮುತ್ತಲಿನ ಗ್ರಾಮಗಳ ಹೂವಿನ ಬೆಳೆಗಾರರನ್ನು ಆಹ್ವಾನಿಸಿದ್ದರು. ಅದು ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗಿದೆ. ೬೫ ವರ್ಷಗಳಿಂದಲೂ ನಡೆಯುತ್ತಿರುವ ಈ ಪುಷ್ಪೋತ್ಸವ ಕೊಲಂಬಿಯಾದ ಸಾಂಸ್ಕೃತಿಕ ಹೆಗ್ಗುರುತು.

ಮೆಡಿಲಿನ್ ಷಹರ್‌ನನ್ನು ಕೊಲಂಬಿಯಾದ ಶಾಶ್ವತ ವಸಂತಋತು ನಗರ ಎಂದು ಪರಿಗಣಿಸಲಾಗಿದೆ. ದೇಶದ ಎರಡನೇ ಅತಿ ದೊಡ್ಡ ನಗರದ ಹೂವಿನ ಮೇಳ ಮತ್ತು ಪುಷ್ಪೋತ್ಸವಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. ಮಾದಕ ವಸ್ತು ದಂಧೆಯಲ್ಲಿ ಕುಖ್ಯಾತಿ ಪಡೆದಿರುವ ಮೆಡಲಿನ್‌ನ ಕಪ್ಪು ಚುಕ್ಕೆಯನ್ನು ವರ್ಣಮಯ ಪುಷ್ಪಗಳು ಅಳಿಸಿ ಹಾಕಲು ಪ್ರಯತ್ನಿಸುತ್ತಿವೆ.

× Chat with us