ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ಅನುಮತಿ ಬಗ್ಗೆ ಸಿಎಂ, ಗೃಹ ಸಚಿವರು ನಿರ್ಧರಿಸ್ತಾರೆ: ಬಿ.ಸಿ.ಪಾಟೀಲ್

ಮೈಸೂರು: ಇದೇ ಜನವರಿ 26ರಂದು ನಡೆಯುವ ರೈತರ ಟ್ಯ್ರಾಕ್ಟರ್ ರ‍್ಯಾಲಿಗೆ ಅನುಮತಿ ನೀಡುವುದು ಸಿಎಂ ಹಾಗೂ ಗೃಹ ಸಚಿವರ ವಿವೇಚನೆಗೆ ಬಿಟ್ಟದ್ದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಗರದ ಜಲದರ್ಶಿನಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯದಲ್ಲೂ ಹೋರಾಟ ನಡೆಸುವ ರೈತರಿಗೆ ಅನುಮತಿ ನೀಡುವುದನ್ನು ಸಿಎಂ ಹಾಗೂ ಗೃಹ ಸಚಿವರು ನಿರ್ಧರಿಸುತ್ತಾರೆ ಎಂದರು.

ಮುನಿರತ್ನಗೆ ಸಚಿವ ಸ್ಥಾನ ಕುರಿತು ಮಾತನಾಡಿ, ಸಿಎಂ ನುಡಿದಂತೆ ನಡೆದಿದ್ದಾರೆ. ಮುಂದಿನ ದಿನಗಳಲ್ಲಿ ಮುನಿರತ್ನ ಅವರಿಗೂ ಸಚಿವ ಸ್ಥಾನ ಸಿಗಲಿದೆ‌. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲು ನ್ಯಾಯಾಲಯದ ಅಡ್ಡಿ ಇದೆ. ಅವರು ಹಿರಿಯರಿದ್ದಾರೆ, ಅರ್ಥ ಮಾಡಿಕೊಳ್ಳಬೇಕು ಮನ ಬಂದಂತೆ ಮಾತನಾಡಬಾರದು ಎಂದು ತಿಳಿಸಿದರು.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೆಂಟಲ್ ಆಗಿರಬೇಕು. ಮಾನಸಿಕವಾಗಿ ಸ್ವಲ್ಪ ವ್ಯತ್ಯಾಸ ಆಗಿದ್ರೆ ಹೋಗಿ ಆಸ್ಪತ್ರೆಗೆ ಸೇರಿಕೊಳ್ಳಲಿ. ಅದು ಬಿಟ್ಟು ಸುಮ್ಮನೆ ಕರ್ನಾಟಕದ ಗಡಿ ವಿಚಾರಕ್ಕೆ ಬರಬೇಡಿ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದ ಒಂದು ಸೂಜಿಗಾತ್ರದ ಭೂಮಿಯನ್ನೂ ಮಹಾರಾಷ್ಟ್ರಕ್ಕೆ ನೀಡುವುದಿಲ್ಲ. ಮಹಾಜನ ವರದಿ ಜಾರಿಯಾಗಬೇಕು‌, ಅದೇ ಅಂತಿಮ. ಠಾಕ್ರೆ ರಾಜಕೀಯ ತೆವಲಿಗೆ ಮಾತನಾಡುತ್ತಿದ್ದಾರೆ. ಅಲ್ಲಿ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಇಲ್ಲಿ ಹುಳಿ ಹಿಂಡುತ್ತಿದ್ದಾರೆ. ಅವರ ನಡೆಯಿಂದ ರಾಜ್ಯದಲ್ಲಿರುವ ಮರಾಠಿಗರಿಗೂ ಅಪಖ್ಯಾತಿ ಬರಲಿದೆ. ಎಲ್ಲೋ ಒಂದಿಬ್ಬರು ಮಹಾರಾಷ್ಟ್ರ ಪರ ಕೂಗುವ ಕಿಡಿಗೇಡಿ ಬಿಟ್ಟರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸುಮ್ಮನೆ ಹೇಳಿಕೆ ನೀಡಿ ಇಲ್ಲಿರುವವರ ಬದುಕಿಗು ಸಮಸ್ಯೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

× Chat with us