ಪ್ರಾಥಮಿಕ ಶಾಲೆಗಳ ಪುನರಾರಂಭ: ಇಂದು ಮಹತ್ವದ ಸಭೆ

ಬೆಂಗಳೂರು: ನೆರೆಯ ಕೇರಳದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು, ರಜ್ಯದಲ್ಲಿನ ಮೂರನೇ ಅಲೆ ಭೀತಿ, 1ರಿಂದ 8ನೇ ತರಗತಿಗಳವರೆಗೆ ಶಾಲೆಗಳ ಪುನರಾರಂಭ, ಗಣೇಶ ಉತ್ಸವ ಆಚರಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಮಹತ್ವದ ಸಭೆ ನಡೆಸಲಿದ್ದಾರೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮತ್ತು ಸಚಿವರ ಸಭೆ ಕರೆದಿರುವ ಅವರು ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಕೇರಳದಲ್ಲಿ ಕಳೆದ ಎರಡು ವಾರಗಳಿಂದ ಪ್ರತಿನಿತ್ಯ 25 ಸಾವಿರದಿಂದ 32 ಸಾವಿರದವರೆಗೂ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ವೀಕೆಂಡ್ ಲಾಕ್‌ಡೌನ್ ವಿಸ್ತರಣೆ ಹಾಗೂ ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.

ಈಗಾಗಲೇ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹೆಚ್ಚಿನ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮತ್ತು ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ನೀಡಬೇಕೆಂದು ಸೂಚಿಸಲಾಗಿದೆ.

ಆದಾಗ್ಯೂ ಕೇರಳದಲ್ಲಿ ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದ ಆತಂಕಗೊಂಡಿರುವ ರಾಜ್ಯ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧವಾಗಿ ತಜ್ಞರು ಮತ್ತು ಸಚಿವರ ಸಭೆ ಕರೆದಿದೆ. ಕೆಲವು ಕಡೆ ವೀಕೆಂಡ್ ಕರ್ಫ್ಯೂ ಹಾಕಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸಭೆಯಲ್ಲಿ ತಜ್ಞರು ಸರ್ಕಾರಕ್ಕೆ ನೀಡುವ ಸಲಹೆಗಳನ್ನು ಆಧರಿಸಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.

ಈಗಾಗಲೇ ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಹಬ್ಬವನ್ನು ಸಾರ್ವಜನಿಕರು ಸರಳವಾಗಿ ಆಚರಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರೆ ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದಿದೆ.

ಶಾಲೆಗಳ ಬಗ್ಗೆಯೂ ಚರ್ಚೆ

ಈಗಾಗಲೇ 9ರಿಂದ 12ನೇ ತರಗತಿವರೆಗೆ (ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ) ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದಲೂ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಇದರ ಬೆನ್ನಲೇ 1ರಿಂದ 8ನೇ ತರಗತಿವರೆಗೂ ಶಾಲೆಗಳನ್ನು ಆರಂಭಿಸಬೇಕೆಂಬ ಬೇಡಿಕೆಯೂ ಹೆಚ್ಚುತ್ತಿದೆ. ಈ ಬಗ್ಗೆಯೂ ಸೋಮವಾರ ತಜ್ಞರ ಜೊತೆ ಮುಖ್ಯಮಂತ್ರಿ ಚರ್ಚೆ ಮಾಡಲಿದ್ದಾರೆ.

× Chat with us