ಕಂದಾಯ ಸಚಿವರ ಕಾರ್ಯಕ್ರಮದಲ್ಲೇ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಫೈಟ್‌!

ಕುಶಾಲನಗರ: ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಸಚಿವ ಆರ್‌.ಅಶೋಕ್‌ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲೇ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ.

ನೂತನ ಕುಶಾಲನಗರ ತಾಲ್ಲೂಕನ್ನು ಕಂದಾಯ ಸಚಿವರಾದ ಆರ್.ಅಶೋಕ್ ಅವರು ಮಂಗಳವಾರ ಉದ್ಘಾಟಿಸಿದರು. ಶಾಸಕ ಅಪ್ಪಚ್ಚು ರಂಜನ್‌ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಕಂದಾಯ ಸಚಿವರು ಮಾತನಾಡುತ್ತಿದ್ದಾಗ, ಕುಶಾಲನಗರ ತಾಲ್ಲೂಕು ಹೋರಾಟ ಹೋರಾಟಗಾರರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ ಅವರು ವೇದಿಕೆ‌ ಬಳಿ ತೆರಳಿ ಸಚಿವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಶಾಸಕ ಅಪ್ಪಚ್ಚುರಂಜನ್ ಹಾಗೂ ಕೆ.ಪಿ.ಚಂದ್ರಕಲಾ ನಡುವೆ ಮಾತಿನ ಚಕಮಕಿ‌ ನಡೆಯಿತು. ಇದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆಯಲು ಕಾರಣವಾಯಿತು. ಬಿಜೆಪಿಗರು ಬಿಜೆಪಿಪರ ಜೈಕಾರ ಕೂಗಿದರೇ, ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಈ ವೇಳೆ ಸಂಸದರು‌ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ನಂತರ ಪೋಲೀಸರು ಮಧ್ಯ ಪ್ರವೇಶಿಸಿದರು. ತಾಲ್ಲೂಕು ಹೋರಾಟಗಾರ ವಿ.ಪಿ.ಶಶಿಧರ್ ಅವರ ಮೇಲೆ ಬಲಪ್ರಯೋಗಿಸಿ ಅವರನ್ನು ಸಭಾಂಗಣದಿಂದ‌ ಹೊರ‌ ನಡೆಸಿದರು. ಪೋಲೀಸರ ನಡೆಯನ್ನು ಖಂಡಿಸಿದ ಕೆ.ಪಿ.ಚಂದ್ರಕಲಾ‌ ಹಾಗೂ ಕಾಂಗ್ರೆಸ್ ಮುಖಂಡರು ಪೋಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

ಕುಶಾಲನಗರ ತಾಲ್ಲೂಕು ಹೋರಾಡ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪೋಲೀಸರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸಿದ್ದಾರೆ. ಶಾಸಕರ ಮನವೊಲಿಸಲು ನಮ್ಮ‌ ಮೇಲೆ ಬಲಪ್ರಯೋಗ ಮಾಡಿದ್ದಾರೆ. ಪೋಲೀಸರ ವರ್ತನೆ ಖಂಡನೀಯ ಎಂದರು.

× Chat with us