ಚಾ.ನಗರ: 766 ಮಕ್ಕಳು ಶಾಲೆಯಿಂದ ಹೊರಗೆ

-ಕೆ.ಎಂ.ಸಿದ್ದರಾಜು ಕಪ್ಪಸೋಗೆ

ಚಾಮರಾಜನಗರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಪೂರ್ಣಗೊಂಡಿದ್ದು, ಸ್ಥಳೀಯ ಸಂಸ್ಥೆಗಳ ಅಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಈ ಸಮೀಕ್ಷೆಯಲ್ಲಿ ೭೬೬ ಮಕ್ಕಳು ಶಾಲೆಯಿಂದ, ೨,೩೫೯ ಮಕ್ಕಳು ಅಂಗನವಾಡಿಯಿಂದ ಹೊರಗುಳಿದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಕೋವಿಡ್ ಹಿನ್ನೆಲೆಯಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಬಡತನದಿಂದಾಗಿ ಈ ಮಕ್ಕಳು ಶಾಲೆಯಿಂದ ಹೊರಗುಳಿಯಲು ಪ್ರಮುಖ ಕಾರಣವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಕೊಳಗೇರಿ ಪ್ರದೇಶದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಸಮೀಕ್ಷೆ ವೇಳೆ ಕಂಡು ಬಂದಿದೆ.

೨೦೧೧ರ ಜನಗಣತಿಯ ಪ್ರಕಾರ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ೨,೨೫,೬೫೨ ಕುಟುಂಬಗಳಿದ್ದು, ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಾದ ಜನಸಂಖ್ಯೆ ಹಿನ್ನೆಲೆಯಲ್ಲಿ ೩,೨೯೮ ಕುಟುಂಬಗಳು ಹೆಚ್ಚುವರಿಯಾಗಿ ಕಂಡು ಬಂದಿದ್ದು, ಅವುಗಳನ್ನು ಕೂಡ ಸಮೀಕ್ಷೆ ನಡೆಸಲಾಗಿದೆ. ಒಟ್ಟು ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿ ೨,೨೮,೯೫೦ ಕುಟುಂಬಗಳು ಕಂಡು ಬಂದಿವೆ. ಈ ಕುಟುಂಬಗಳ ೫೬,೩೮೮ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿ ಆರು ವರ್ಷದೊಳಗಿನ ೭,೨೩೮ ಮಕ್ಕಳು ಅಂಗನವಾಡಿಗಳಲ್ಲಿ ದಾಖಲಾತಿ ಪಡೆದಿದ್ದರೆ, ೨,೩೫೯ ಮಕ್ಕಳು ಅಂಗನವಾಡಿಗಳಿಂದಲೂ ಹೊರಗುಳಿದಿವೆ. ಆರರಿಂದ ೧೮ ವರ್ಷದೊಳಗಿನ ೫೬,೩೮೮ ಮಕ್ಕಳ ಪೈಕಿ ೪೫,೮೯೮ ಮಕ್ಕಳು ಜಿಲ್ಲೆಯ ಶಾಲೆಗಳಲ್ಲಿ ದಾಖಲಾತಿ ಪಡೆದಿದ್ದರೆ, ೬ರಿಂದ ೧೪ ವರ್ಷದೊಳಗಿನ ೧೮೦ ಮಕ್ಕಳು, ೧೫ರಿಂದ ೧೮ ವರ್ಷದೊಳಗಿನ ೫೮೬ ಮಕ್ಕಳು ಸೇರಿ ಒಟ್ಟು ೭೬೬ ಮಕ್ಕಳು ಶಾಲೆಯಿಂದ ಹೊರಗುಳಿದಿವೆ. ೧೨೭ ಮಕ್ಕಳು ಶಾಲೆಯ ಬಾಗಿಲನ್ನೇ ಕಂಡಿಲ್ಲ.

ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೨೦೫೭ ಕುಟುಂಬಗಳ ಪೈಕಿ ೧,೯೮೨ ಕುಟುಂಬಗಳು, (ಶೇ ೯೬.೩೫), ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೨,೩೦೦ ಕುಟುಂಬಗಳಲ್ಲಿ ೨,೩೨೪ (ಶೇ ೧೦೧.೦೪) ಕುಟುಂಬಗಳು,  ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ೫,೨೬೪ ಕುಟುಂಬಗಳು (ಶೇ ೧೨೦.೭೩), ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ೧೭,೧೫೪ ಕುಟುಂಬ (ಶೇ ೧೦೨.೭೨), ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ೧೪,೦೧೨ ಕುಟುಂಬಗಳು (ಶೇ ೧೦೫.೭೫) ಸಮೀಕ್ಷೆ ನಡೆಸಲಾಗಿದೆ.

ಶಾಲೆಯಿಂದ ಹೊರಗಳಿಂದ ಮಕ್ಕಳ ಸಮೀಕ್ಷೆಯಲ್ಲಿ ರಾಜ್ಯದ ೩೦ ಜಿಲ್ಲೆಗಳ ಪೈಕಿ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು (೨,೬೬೬) ಮಕ್ಕಳು ಶಾಲೆಯಿಂದ ಹೊರಗುಳಿಯುವ ಮೂಲಕ ಮೊದಲ ಸ್ಥಾನ ಪಡೆದಿದೆ. ಶಿವಮೊಗ್ಗ ಜಿಲ್ಲೆಯು (೨,೨೯೯ ಮಕ್ಕಳು) ಎರಡನೇ ಸ್ಥಾನ ಪಡೆದಿದೆ. ಈ ಪೈಕಿ ಚಾಮರಾಜನಗರ ಜಿಲ್ಲೆಯು ೧೦ನೇ ಸ್ಥಾನ ಪಡೆದಿದೆ.

ನಗರ ಸ್ಥಳೀಯ ಸಂಸ್ಥೆಗಳ ನೌಕರರ ಮೂಲಕ ೨೦೨೧ರ ಜನವರಿಯಲ್ಲಿ ಸಮೀಕ್ಷೆಯನ್ನು ಆರಂಭಿಸಲಾಗಿತ್ತು. ಕೋವಿಡ್ ಕಾರಣದಿಂದ ಸಮೀಕ್ಷೆ ಕಾರ್ಯ ವಿಳಂಬವಾಗಿತ್ತು. ಸದ್ಯ ಸಮೀಕ್ಷೆ ಪೂರ್ಣಗೊಂಡಿದ್ದು ೭೬೬ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಸಮೀಕ್ಷೆಯ ವರದಿಯನ್ನು ಶೀಘ್ರವೇ ಜಿಲ್ಲಾಕಾರಿ ಅವರಿಗೆ ಸಲ್ಲಿಸಲಾಗುವುದು.

-ಕೆ.ಸುರೇಶ್, ಯೋಜನಾ ನಿರ್ದೇಶಕ, ಜಿಲ್ಲಾ ನಗರಾಭಿವೃದ್ಧಿ ಕೋಶ

× Chat with us