ಹಂಪಿ ಕನ್ನಡ ವಿ.ವಿ. ಉಳಿಸಿ ಅಭಿಯಾನಕ್ಕೆ ಸಾಹಿತಿಗಳ ಬೆಂಬಲ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವುದೂ ಸೇರಿದಂತೆ ಒಟ್ಟಾರೆಯಾಗಿ ವಿಶ್ವವಿದ್ಯಾಲಯ ಎದುರಿಸುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಒತ್ತಾಯಿಸಿ ನಡೆಸುತ್ತಿರುವ ಕನ್ನಡ ವಿವಿ ಉಳಿಸಿ ಅಭಿಯಾನದ ಭಿತ್ತಿಪತ್ರ ಚಳವಳಿ ಐದನೇ ದಿನವೂ ಯಶಸ್ವಿಯಾಗಿ ನಡೆದಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಾಹಿತಿಗಳು, ತಡಮಾಡದೇ ಸಮಸ್ಯೆ ಬಗೆಹರಿಸಲು ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ. ಸಾವಿರಾರು ಕರವೇ ಕಾರ್ಯಕರ್ತರು ಸಾಹಿತಿಗಳ ಹೇಳಿಕೆಗಳನ್ನೊಳಗೊಂಡ ಭಿತ್ತಿಪತ್ರಗಳನ್ನು ಟ್ವಿಟರ್, ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಗಣ್ಯರ ಅಭಿಪ್ರಾಯಗಳು…
ʻರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ ಹಣಕಾಸಿನ ಮುಗ್ಗಟ್ಟಿಗೆ ತಲುಪಿರುವುದು ನಾಚಿಕೆಗೇಡಿನ ವಿಚಾರ, ಸರಕಾರ ಬೇರೆ ವಿಶ್ವವಿದ್ಯಾಲಯಗಳಿಗಿಂತ ವಿಶೇಷವಾಗಿ ಕನ್ನಡ ವಿಶ್ವವಿದ್ಯಾಲಯವನ್ನು ಕಂಡು, ವಿಶ್ವವಿದ್ಯಾಲಯವನ್ನು ಬೆಳೆಸಬೇಕು ಎಂದು ಎಲ್ಲಾ ಕನ್ನಡಿಗರ ಪರವಾಗಿ ಕೇಳಿಕೊಳ್ಳುತ್ತೇನೆ.ʼ
-ಗೊ.ರು.ಚನ್ನಬಸಪ್ಪ, ಜಾನಪದ ವಿದ್ವಾಂಸರು

ʻಕನ್ನಡ ಸಂಸ್ಕೃತಿ, ಭಾಷೆ ಅಭಿವೃದ್ಧಿ, ಸಾಹಿತ್ಯ, ಜನಪದ, ವಿಮರ್ಶೆ ಇತ್ಯಾದಿ ಪ್ರಕಾರಗಳಿಗೆ ಕನ್ನಡ ವಿಶ್ವವಿದ್ಯಾನಿಲಯ ನೀಡಿರುವ ಕೊಡುಗೆ ಅನನ್ಯ. ಕನ್ನಡ ವಿಶ್ವವಿದ್ಯಾನಿಲಯ ಕನ್ನಡದ ಅಸ್ಮಿತೆ ಮತ್ತು ಕರ್ನಾಟಕವೆಂಬ ಪರಿಕಲ್ಪನೆಯ ರೂಪಕ. ಭಾಷೆ ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾನಿಲಯವನ್ನು ಉಳಿಸುವ ಅಗತ್ಯತೆ ಹೆಚ್ಚಾಗಿದೆ. ಅದರ ಅಳಿವು ಮತ್ತು ಉಳಿವು ನಮ್ಮೆಲ್ಲರ ಅಸ್ಮಿತೆಯ ಅಳಿಯು ಮತ್ತು ಉಳಿವು ಹೌದು. ಅದನ್ನು ಉಳಿಸುವ ಯತ್ನಗಳನ್ನು ಕನ್ನಡದ ಎಲ್ಲಾ ಮನಸ್ಸುಗಳು ಕೂಡಲೇ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.ʼ
-ಪ್ರೊ.ಮುಜಾಫರ್ ಅಸಾದಿ, ಚಿಂತಕರು

ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಅಸ್ಮಿತೆಯ ಸಂಕೇತ. ಅದನ್ನು ಬೆಳೆಸುವುದು ಕರ್ನಾಟಕ ಸರ್ಕಾರದ ಆದ್ಯತೆಯಾಗಬೇಕು. ಸಂಸ್ಕೃತಕ್ಕಿಲ್ಲದ ಅನುದಾನದ ಕೊರತೆ ಕನ್ನಡಕ್ಕಿದೆ ಎಂದರೆ ನಾವು ನಾಚಿ ತಲೆತಗ್ಗಿಸಬೇಕು. ಕನ್ನಡಪರ ಶಕ್ತಿಗಳೆಲ್ಲಾ ಒಗ್ಗೂಡಿ ಈ ಅಪಮಾನಕ್ಕೆ ಕಾರಣರಾದವರಿಗೆ ತಕ್ಕ ಪಾಠ ಕಲಿಸಬೇಕು.
-ಡಾ.ಕೆ.ಮರುಳಸಿದ್ಧಪ್ಪ, ಮಾಜಿ ಅಧ್ಯಕ್ಷರು, ಕುವೆಂಪು ಭಾಷಾಭಾರತಿ ಪ್ರಾಧಿಕಾರ

ʻಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಮುಗ್ಗಟ್ಟಿನ ಕರುಣಾಜನಕ ಪರಿಸ್ಥಿತಿ ಕುರಿತ ವರದಿ ದಿಗ್ಭ್ರಮೆಗೊಳಿಸಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಶೈಕ್ಷಣಿಕ ದುರಂತವೆಂದರೆ ಸರ್ಕಾರ ಇದನ್ನು ಇಷ್ಟು ಬೆಳೆಯಲು ಬಿಟ್ಟಿರುವುದು. ಪರಿಹಾರ ವಿಳಂಬವಾದಷ್ಟೂ ಅಪಾಯಕಾರಿ.ʼ
-ಪ್ರೊ. ಹಂ.ಪ.ನಾಗರಾಜಯ್ಯ (ಹಂಪನಾ), ಭಾಷಾವಿಜ್ಞಾನಿ, ಸಂಶೋಧಕ

ʻಹಂಪಿ ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆ, ಇದರ ಸಂಪೂರ್ಣ ಉನ್ನತಿಗೆ ಕರ್ನಾಟಕ ಸರ್ಕಾರ ನೆರವಾಗಬೇಕು. ಜನತೆ ಮತ್ತು ಜನಭಾಷೆಗಳಿಗೆ ಜನತಂತ್ರ ವ್ಯವಸ್ಥೆಯಲ್ಲಿ ಮೊದಲ ಆದ್ಯತೆ ಸಲ್ಲಲೇಬೇಕು. ಹೊಣೆಗೇಡಿತನವನ್ನು ಇತಿಹಾಸ ಕ್ಷಮಿಸುವುದಿಲ್ಲ.ʼ
-ಪ್ರೊ. ಕಾಳೇಗೌಡ ನಾಗವಾರ, ಸಾಹಿತಿ, ಸಂಸ್ಕೃತಿ ಚಿಂತಕರು

ʻಒಯ್ ಬ್ಯಾಡ ಬೈಯ್ ಬ್ಯಾಡ, ಕೊಟ್ಟೆ ಹಿಸುಕಿದ್ರೆ ಅವ್ನೆ ಸಾಯ್ತಾನೆ’ ಅಂತ ನಮ್ಮ ಕಡೆ ಆಡಿಕೊಳ್ಳುತ್ತಾರೆ. ಹಾಗಾಗಿದೆ ಸರ್ಕಾರದ ನೀತಿ. ಯಾವುದೇ ಸಂಸ್ಥೆ ಕ್ರಿಯಾಶೀಲವಾಗಿ ಕೆಲಸ ಮಾಡಲು ವಿಶೇಷ ಅನುದಾನ ಅತ್ಯವಶ್ಯಕ. ಅದರಲ್ಲೂ ಈ ನೆಲದ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಕುರಿತ ಅಧ್ಯಯನಗಳಲ್ಲಿ ತೊಡಗಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಕೂಡಲೇ ಸರ್ಕಾರ ಅನುದಾನಗಳನ್ನು ಬಿಡುಗಡೆ ಮಾಡಬೇಕು.ʼ
-ಪಿಚ್ಚಳ್ಳಿ ಶ್ರೀನಿವಾಸ, ಮಾಜಿ ಅಧ್ಯಕ್ಷರು, ಕರ್ನಾಟಕ ಜಾನಪದ ಅಕಾಡೆಮಿ

ʻಕನ್ನಡದಲ್ಲಿ ಏನಾದರೂ ಕೆಲಸ ಮಾಡಬೇಕೆಂದು ಆಸೆಯಿಂದ ಬರುವ ವಿದ್ಯಾರ್ಥಿಗಳಿಗೆ ಅಲ್ಲಿ ಪ್ರವೇಶ ಕೊಡುತ್ತಿಲ್ಲವಂತೆ, ಗುತ್ತಿಗೆ ನೌಕರರಿಗೆ ಅಲ್ಲಿ ಸಂಬಳ ಕೊಡುತ್ತಿಲ್ಲವಂತೆ, ವಿಶ್ವವಿದ್ಯಾಲಯದ ವಾರ್ಷಿಕ ಖರ್ಚು ವೆಚ್ಚಗಳಿಗೆ ನೀಡುತ್ತಿದ್ದ ಅನುದಾನವನ್ನೂ ನಿಲ್ಲಿಸಲಾಗಿದೆಯಂತೆ. ಸರಕಾರದ ಉದ್ದೇಶವಾದರೂ ಏನು? ಕನ್ನಡದ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆಗೆ ‘ಕನ್ನಡ ವಿಶ್ವವಿದ್ಯಾಲಯ’ವು ನೀಡಿದ್ದ ಕೊಡುಗೆಗಳು ಸಾಕು ಎಂದೇನಾದರೂ ನಿರ್ಧರಿಸಿದೆಯಾ? ಅಥವಾ ಇವುಗಳ ಹಿಂದೆ ಬೇರೇನಾದರೂ ಒಳಗುಟ್ಟು ಇದೆಯಾ?ʼ
– ಬೊಳುವಾರು ಮಹಮದ್ ಕುಂಞಿ, ಕಾದಂಬರಿಕಾರರು

ʻಮಾತೃಭಾಷೆಯ ಅಭಿವೃದ್ಧಿ ಮತ್ತು ಪ್ರಾದೇಶಿಕ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ನೆಲ, ಜಲ ಮುಂತಾದ ಸಂಗತಿಗಳ ಮೇಲೆ ಸಂಶೋಧನೆಯ ಮುಖಾಂತರ ಬೆಳಕು ಚೆಲ್ಲುವ ಹಾಗು ಅವುಗಳ ಬೆಳವಣಿಗೆಗೆ ರೂಪುರೇಷೆ ತಯಾರಿಸುವ ಗುರುತರ ಹೊಣೆಗಾರಿಕೆ ನಿಭಾಯಿಸುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಅನುದಾನ ನೀಡದೆ ಇರುವುದು ಬಹುದೊಡ್ಡ ನಾಡದ್ರೋಹಿ ಕೃತ್ಯವಾಗಿದೆ. ಇದನ್ನು ವಿರೋಧಿಸಿ ವಿವಿ ಉಳಿಸಿ ಅಭಿಯಾನಕ್ಕೆ ನಾವೆಲ್ಲರೂ ಕೈಗೂಡಿಸುವ ತುರ್ತು ಅಗತ್ಯ ಇಂದು ಹೆಚ್ಚಿದೆ.ʼ
-ಡಾ.ಜೆ.ಎಸ್.ಪಾಟೀಲ, ಚಿಂತಕ, ಬರಹಗಾರ

ʻಹಂಪಿ ಕನ್ನಡ ವಿಶ್ವವಿದ್ಯಾಲಯದ ಅವಸಾನವೆಂದರೆ ಆರ್ಯಸಂಸ್ಕೃತಿ ದ್ರಾವಿಡ ಸಂಸ್ಕೃತಿಯ ಮೇಲೆ ಎಸಗುತ್ತಿರುವ ದಾಳಿಯೇ ಆಗಿದೆ. ಹಾಗೆ ನೋಡಿದರೆ ಹಂಪಿ ಒಂದೇ ಅಲ್ಲ ರಾಜ್ಯದ ಹಲವು ಕಡೆ ಕನ್ನಡ ವಿ.ವಿ.ಗಳು ರೂಪುಗೊಳ್ಳಬೇಕು. ಕರುನಾಡಿನ ವಿವಿಧ ಪ್ರಾದೇಶಿಕ ಸಂಸ್ಕೃತಿಗಳ ಅಂಶವನ್ನು ಅಧ್ಯಯನ ಮತ್ತು ಸಂಶೋಧನೆಗಳಿಗೆ ಇಂಬು ಕೊಡುವ ಮೂಲಕ ಈ ವಿ.ವಿ.ಗಳು ಮುನ್ನೆಲೆಗೆ ತರಬೇಕು. ಎಂದೂ ಜನರ ಭಾಷೆಯಾಗದ ನಾಟಕೀಯ ಭಾಷೆ ಸಂಸ್ಕೃತದ ಹೇರಿಕೆಯು ಸನಾತನ ಯಜಮಾನಿಕೆಯನ್ನು ಹೇರುವ ಪಿತೂರಿಯಾಗಿದೆ. ಹಂಪಿ ಕನ್ನಡ ವಿ.ವಿ. ಕನ್ನಡಿಗರಿಗಾಗಿ ಉಳಿಯಲೇಬೇಕು.ʼ
-ಕೆ.ಎಸ್.ರವಿಕುಮಾರ್, ಕವಿ, ಲೇಖಕ

ʻವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಕಡಿಮೆಯಾಗಿ ಗುಣಮಟ್ಟ ಇಳಿಯುತ್ತಿದ್ದ ಹೊತ್ತಿನಲ್ಲಿ, ಅದನ್ನೇ ಪ್ರಧಾನವಾಗಿಸಿಕೊಂಡು ಆರಂಭವಾದ ಸಂಸ್ಥೆಯೇ ಹಂಪಿ ವಿಶ್ವವಿದ್ಯಾಲಯ. ಕನ್ನಡ ವಿವಿಯಲ್ಲಿ ಅಂತರ್ ಶಿಸ್ತೀಯ ಒಡನಾಟದ ಮಾದರಿಯೊಂದನ್ನು ರೂಪಿಸಿ, ವಿಶಿಷ್ಟ ಬಗೆಯ ಅಧ್ಯಯನ-ಸಂಶೋಧನೆ-ಶಿಕ್ಷಣದ ಸಂಯೋಜನೆಯನ್ನು ಕಟ್ಟಿದರು. ಇಂತಹ ಸಂಸ್ಥೆಯು ಕನ್ನಡದ ಕರ್ನಾಟಕದ ಹೆಮ್ಮೆ. ಇದನ್ನು ವಿಸ್ತರಿಸುವ ಬದಲಿಗೆ ಅನುದಾನದ ಕಡಿತದ ಮೂಲಕ ನಾಶ ಮಾಡುವ ಪ್ರಯತ್ನ ನಡೆದಿದೆ. ಕರ್ನಾಟಕ ಸರ್ಕಾರದ ಈ ನಡೆಯ ಹಿಂದೆ ಬೇರೇನೋ ಹುನ್ನಾರವಿದೆ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.ʼ
– ಡಾ.ಎಚ್.ವಿ.ವಾಸು, ಸಾಮಾಜಿಕ ಕಾರ್ಯಕರ್ತ

× Chat with us