ನಾನು ಸಿಎಂ ಆಗ್ಬೇಕು ಅಂತ ಗಡ್ಡ ಬಿಟ್ಟಿರಲಿಲ್ಲ: ಸಿ.ಟಿ.ರವಿ

ಚಿಕ್ಕಮಗಳೂರು: ನಾನು ಮುಖ್ಯಮಂತ್ರಿ ಆಗಬೇಕು ಅಂತ ಗಡ್ಡ ಬಿಟ್ಟಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟಪಡಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರದ ಮೈಲಾರಲಿಂಗ ಭವಿಷ್ಯ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಮುಖ್ಯಮಂತ್ರಿ ಅಗಬೇಕು ಅನ್ನೋದಕ್ಕೆ ಗಡ್ಡ ಬಿಟ್ಟಿದ್ದಲ್ಲ. ಕಾಲೇಜು ದಿನಗಳಿಂದಲೂ‌ ನಿರಂತರವಾಗಿ ಗಡ್ಡ ಬಿಟ್ಟು ಕೊಂಡು ಬಂದಿದ್ದೇನೆ. ಗಡ್ಡದಾರಿ ಅಂತಾ ಅವರ ಹೇಳಿದ್ದು ನಿಜವಾಗಿದ್ದರೆ ಬಹಳ ಜನ ಗಡ್ಡ ಬಿಡಬಹುದು. ಯಾರ‍್ಯಾರು ಮುಖ್ಯಮಂತ್ರಿಯಾಗಬೇಕು ಅಂತಾ ಆಕಾಂಕ್ಷಿಗಳಾಗಿರುತ್ತಾರೋ ಅವರೆಲ್ಲ ಗಡ್ಡ ಬಿಡೋಕೆ ಪ್ರಾರಂಭಿಸಬಹುದು ಎಂದು ಪ್ರತಿಕ್ರಿಯಿಸಿದರು.

ಸಿಎಂ ರೇಸ್‌ನಲ್ಲಿ ನನ್ನೊಬ್ಬನಷ್ಟೇ ಅಲ್ಲ ಹಲವರ ಹೆಸರು ಕೇಳಿಬರುತ್ತಿತ್ತು. ಯೋಗನೂ ಇರಬೇಕಲ್ವ, ಈಗ ಬಸವರಾಜ ಬೊಮ್ಮಯಿ ಅವರಿಗೆ ಯೋಗ ಕೂಡಿ ಬಂದಿದೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಅವರು ನಮ್ಮ ಸ್ನೇಹಿತರು, ಎಲ್ಲ ರೀತಿಯ ಸಹಕಾರವನ್ನು ಕೊಡುತ್ತೇವೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರಣೆ ಕುರಿತು ಪ್ರತಿಕ್ರಿಯಿಸಿ, ರಾಜ್ಯದ ಹಿತವನ್ನು ಮುಖ್ಯವಾಗಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಿ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ ಎರಡನ್ನು ಕಾಪಾಡಿಕೊಂಡು ವಿಸ್ತರಣೆ ಮಾಡುತ್ತಾರೆ. ಒಳ್ಳೆಯ ಸಂಪುಟ ರಚನೆ ಮಾಡಿ ಅವರ ನೇತೃತ್ವದಲ್ಲಿ ಮತ್ತೆ ಚುನಾವಣೆ ಗೆದ್ದು ಬರಬೇಕು. ಆ ರೀತಿ ವಿಸ್ತರಣೆ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ 30ರಷ್ಟು ತಮಿಳುನಾಡಿನವರೇ ಇದ್ದಾರೆ. ತಮಿಳುನಾಡಿಗೂ ಅನುಕೂಲ ಅಗಬೇಕು, ಕರ್ನಾಟಕಕ್ಕೂ ಅನುಕೂಲವಾಗುವಂತೆ ಮಧ್ಯಮ ಮಾರ್ಗದಲ್ಲಿ ಮೇಕೆದಾಟು ಮಾಡಬೇಕು. ಎರಡು ರಾಜ್ಯದ ಮುಖ್ಯಮಂತ್ರಿಗಳು ರಾಜಕಾರಣ ಮಾಡದೆ ವಾಸ್ತವಿಕ ನೆಲೆಯಲ್ಲಿ ಯೋಚನೆ ಮಾಡಲಿ ಎಂದು ಸಲಹೆ ನೀಡಿದರು.

× Chat with us