ಮುಡಾದಲ್ಲಿ ಆನ್‌ಲೈನ್‌ ಕಂದಾಯ ಪಾವತಿ ವ್ಯವಸ್ಥೆಗೆ ಚಾಲನೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ನಿವೇಶನ ಮತ್ತು ಮನೆ ಕಂದಾಯ ಪಾವತಿಸಲು ಅನುಕೂಲವಾಗುವಂತೆ ಹಾಗೂ ತಮ್ಮ ಸ್ಥಳಗಳಿಂದಲೇ ಆನ್‌ಲೈನ್ ಮೂಲಕ ಕಂದಾಯ ಪಾವತಿಸುವ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಪ್ರಾಧಿಕಾರದ ಕಚೇರಿ ಎದುರು ನಡೆದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಕಿಯಾಸ್ಕ್‌ನಲ್ಲಿ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರಲ್ಲದೆ, ಇಬ್ಬರಿಗೆ ಇ-ಕಂದಾಯ ಪಾವತಿ ರಶೀತಿ ನೀಡಿದರು. ಬಳಿಕ ಮಾತನಾಡಿದ ಸಚಿವ ಭೈರತಿ ಬಸವರಾಜು, ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ತಂತ್ರಜ್ಞಾನ ಬಳಸಿಕೊಂಡು ಅನುಕೂಲ ಮಾಡಿಕೊಡಬೇಕು. ಮುಡಾದಿಂದ ಆನ್‌ಲೈನ್ ತೆರಿಗೆ ಪಾವತಿ ವ್ಯವಸ್ಥೆಯನ್ನು ಅಳವಡಿಸಿ ಜಾರಿಗೆ ತಂದಿರುವುದು ಸಂತಸ ತಂದಿದೆ ಎಂದು ಹೇಳಿದರು. ಪ್ರಾಧಿಕಾರದ ಬಡಾವಣೆಗಳು ಎದುರಿಸುತ್ತಿರುವ ಮೂಲ ಸೌಕರ್ಯಗಳನ್ನು ನಿವಾರಿಸಲು ಸರ್ಕಾರ ಆದ್ಯತೆ ನೀಡಿದೆ. ನೀರಿನ ಕರ, ಮನೆ ಕರ ಸೇರಿ ಪ್ರತಿಯೊಂದು ತೆರಿಗೆ ಪಾವತಿಯನ್ನು ಆನ್‌ಲೈನ್ ಮೂಲಕವೇ ಪಾವತಿಸುವ ವ್ಯವಸ್ಥೆ ಮಾಡಿದರೆ ಸಾರ್ವಜನಿಕರು ತಮ್ಮ ಮನೆಯಲ್ಲೇ ಕುಳಿತು ಪಾವತಿಸಬಹುದು. ಇದರಿಂದ ಸಮಯ ಉಳಿಯುತ್ತದೆ. ತೆರಿಗೆ ಸೋರಿಕೆಯು ತಪ್ಪಲಿದೆ ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮುಡಾದಲ್ಲಿ ನಕ್ಷೆ ಅನುಮೋದನೆ ನೀಡಲು ಸಾಕಷ್ಟು ವಿಳಂಬವಾಗುತ್ತಿದೆ. ಕಂದಾಯ ಪಾವತಿಸಿ ಎಲ್ಲ ದಾಖಲೆಗಳನ್ನು ಒದಗಿಸಿದ ತಕ್ಷಣ ಎರಡು ತಿಂಗಳಳೊಳಗೆ ಪ್ಲಾನ್ ಅನುಮೋದನೆ ನೀಡಲು ಕ್ರಮಕೈಗೊಳ್ಳುವಂತೆ ಸಚಿವರಲ್ಲಿ ಮನವಿ ಮಾಡಿದರು.

ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುಡಾ ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‌ಸೇಠ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಸಂಸದ ಪ್ರತಾಪಸಿಂಹ, ಪ್ರಾಧಿಕಾರದ ಸದಸ್ಯರಾದ ಎಸ್.ಲಕ್ಷ್ಮೀದೇವಿ, ಎಂ.ಎನ್.ನವೀನ್‌ಕುಮಾರ್,ಜಿ.ಲಿಂಗಯ್ಯ, ಕೆ.ಮಾದೇಶ್, ಎಸ್‌ಬಿಎಂ ಮಂಜು, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್, ಆಯುಕ್ತ ಡಾ.ಡಿ.ಬಿ.ನಟೇಶ್, ಕಾರ್ಯದರ್ಶಿ ಎಂ.ಕೆ.ಸವಿತ, ಅಧೀಕ್ಷಕ ಅಭಿಯಂತರ ಎಸ್.ಶಂಕರ್, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ ಇನ್ನಿತರರು ಹಾಜರಿದ್ದರು.

× Chat with us