ಶಾಸಕ ಎನ್.ಮಹೇಶ್‌ ಬೇನಾಮಿ ಆಸ್ತಿ ಮಾಡಿದ್ದಾರೆ: ಬಿಎಸ್‌ಪಿ ಮುಖಂಡ ಆರೋಪ

ಕೊಳ್ಳೇಗಾಲ: ಶಾಸಕ ಎನ್.ಮಹೇಶ್ ಅವರು ಕ್ಷೇತ್ರದ ಮತದಾರರಿಗೆ ಅನ್ಯಾಯ ಮಾಡಿ ಮೈಸೂರು, ಬೆಂಗಳೂರು, ಕನಕಪುರದಲ್ಲಿ ಅಕ್ರಮವಾಗಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಬಿಎಸ್‌ಪಿ ಕ್ಷೇತ್ರಾಧ್ಯಕ್ಷ ರಾಜಶೇಖರ್ ಮೂರ್ತಿ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮವಾಗಿ ಬೇನಾಮಿ ಆಸ್ತಿ ಮಾಡಿರುವ ಎನ್.ಮಹೇಶ್‌ ಅವರು ಜನರ ಮುಂದೆ ನಿಂತು ನಾನು ಯಾರಿಗೂ ದ್ರೋಹ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಸಮಿಶ್ರ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಅವರು ಏಕೆ ವಿಧಾನಸಭೆಗೆ ಹೋಗಲಿಲ್ಲ ಎಂದು ಪ್ರಶ್ನಿಸಿದರು.

ಮಾಯಾವತಿ ಅವರು ಸಮಿಶ್ರ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಸೂಚನೆ ನೀಡಿದ್ದರೂ ಅವರು ಏಕೆ ವಿಧಾನಸಭೆಗೆ ಗೈರಾದರು? ನಾನು ತಮಿಳುನಾಡಿನ ಈಶಾ ಫೌಂಡೇಷನ್‌ನಲ್ಲಿದ್ದೆ ಎಂದು ಸುಳ್ಳು ಹೇಳಿದ್ದಾರೆ ಎಂದು ತಿಳಿಸಿದರು.

ಮಹೇಶ್ ಬಿಎಸ್‌ಪಿಗೆ ದ್ರೋಹ ಮಾಡಿದ್ದಾರೆ. ಬಿಜೆಪಿಗೆ ಕುದುರೆ ವ್ಯಾಪಾರವಾಗಿದ್ದು, ಶಾಸಕ ಸ್ಥಾನವನ್ನೂ ಮಾರಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಭೂಮಿಪೂಜೆಗೂ ಕಮಿಷನ್‌ ಕೇಳುತ್ತಾರೆ. ಇಲ್ಲದಿದ್ದರೆ ಭೂಮಿಪೂಜೆ ಮಾಡುವುದಿಲ್ಲ ಎನ್ನುತ್ತಾರೆ ಎಂದು ಆರೋಪಿಸಿದರು.

ಉಪಾಧ್ಯಕ್ಷ ಹನುಮಂತು, ಟೌನ್ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಮುಖಂಡ ಚೈನಾರಾಂ ಕಾಪಡಿ, ಮಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.

× Chat with us