ಬೆಳಗಾವಿಯಲ್ಲಿ ನೆರೆ ಹಾನಿ: ಇಂದು ಸಿಎಂ ಬಿಎಸ್‌ವೈ ವೈಮಾನಿಕ ಸಮೀಕ್ಷೆ

ಬೆಳಗಾವಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಗ್ರಾಮಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೆರೆ ಹಾವಳಿ ಪ್ರದೇಶಗಳಲ್ಲಿ ಭಾನುವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಜಿಲ್ಲೆಯಲ್ಲಿ 113 ಹಳ್ಳಿಗಳು ಈಗಾಗಲೇ ಜಲಾವೃತಗೊಂಡಿವೆ. 13 ಸಾವಿರ ಜನ ಬೀದಿಗೆ ಬಂದಿದ್ದಾರೆ. 200ಕ್ಕೂ ಅಧಿಕ ಮನೆಗಳು ನೆಲಸಮ ಆಗಿವೆ. ಜಲ ಪ್ರವಾಹದ ಹೊಡೆತಕ್ಕೆ ಇಬ್ಬರು ಸಾವಿಗೀಡಾಗಿದ್ದಾರೆ.

ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಮಾಡಲಿರುವ ಯಡಿಯೂರಪ್ಪ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದ್ದಾರೆ. ಬಳಿಕ ವಿಮಾನ‌ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಬೆಳಿಗ್ಗೆ 11ಗಂಟೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮುಳುಗಡೆಯಾದ ಪ್ರದೇಶಗಳನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ಸಂಕೇಶ್ವರ ಪಟ್ಟಣದಲ್ಲೇ ತೆರೆಯಲಾಗಿರುವ ಶಂಕರಲಿಂಗ ಕಾರ್ಯಾಲಯದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲಿದ್ದಾರೆ.

ಬಳಿಕ ನಿಪ್ಪಾಣಿ ತಾಲ್ಲೂಕಿನ ಯಮಗರಣಿ ಗ್ರಾಮದ ಹತ್ತಿರ ಮುಳುಗಡೆಯಾದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ವೀಕ್ಷಣೆ ಮತ್ತು ಯಮಗರಣಿ ಗ್ರಾಮದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರ ನೋವು ಆಲಿಸಲಿದ್ದಾರೆ.
2.30ಕ್ಕೆ ಸರ್ಕ್ಯೂಟ್ ಹೌಸ್ ಸಭಾಂಗಣದಲ್ಲಿ ಸಿಎಂ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಚಿವರು, ಶಾಸಕರು ಮತ್ತು ಸಂಸದರು ಕೂಡ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

× Chat with us