ಡಿಜಿಟಲ್‌ ಬಳಕೆಯಿಂದ ಉದ್ಯೋಗಿಗಳ ನಡುವೆ ಸ್ನೇಹ ಸಂಬಂಧ ಕುಸಿತ

ಮೈಸೂರು: ಉದ್ಯೋಗ ಕ್ಷೇತ್ರದಲ್ಲಿ ಡಿಜಿಟಲ್ ಬಳಕೆ ಹೆಚ್ಚಿದಂತೆ ಉದ್ಯೋಗಸ್ಥರ ನಡುವಿನ ಸ್ನೇಹ-ಸಂಬಂಧ ಹಾಗೂ ಭಾವನಾತ್ಮ ಮೌಲ್ಯಗಳು ಕುಸಿಯುತ್ತಿವೆ ಎಂದು ಮಾನಸಗಂಗೋತ್ರಿ ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಆನಂದ್ ವಿಷಾಧಿಸಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ಮನೋವಿಜ್ಞಾನ ವಿಭಾಗ ರಾಣಿಬಹದ್ದೂರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಉದ್ಯೋಗ ಜೀವನ ಮತ್ತು ಯೋಗಕ್ಷೇಮದ ಮೇಲೆ ಡಿಜಿಟಲೀಕರಣದ ಪರಿಣಾಮಗಳು’ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜು, ಬ್ಯಾಂಕಿಂಗ್ ಕ್ಷೇತ್ರ ಹಾಗೂ ಸಾರ್ವಜನಿಕ ವಲಯಗಳಲ್ಲಿ ಬಡೆಯುತ್ತಿದ್ದ ಎಷ್ಟೋ ಕೆಲಸಗಳು ವರ್ಕ್ ‘ವರ್ಕ್ ಫ್ರಂ ಹೋಂ’ ಆಗಿ ಪರಿವರ್ತನೆಗೊಂಡಿವೆ. ಹಾಗಾಗಿ ಉದ್ಯೋಗಿಗಳ ನಡುವೆ ಇದ್ದ ಸ್ನೇಹ-ಸಂಬಂಧ, ಭಾವನೆಗಳು ಕುಸಿಯುತ್ತಿವೆ ಎಂದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಪೆನ್ನು, ಪುಸ್ತಕ ಇಲ್ಲದಿದ್ದರೂ ಮೊಬೈಲ್ ಇಲ್ಲದೇ ತರಗತಿಗಳಿಗೆ ಬರುವುದಿಲ್ಲ. ಏಕೆಂದರೆ ತಾಂತ್ರಿಕತೆಯಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಬಹುತೇಕ ಮಂದಿ ಮಾಹಿತಿಯೇ ಜ್ಞಾನ, ಹಣವೇ ಆರೋಗ್ಯ ಅಂದುಕೊಂಡಿದ್ದಾರೆ. ಅದು ತಪ್ಪು. ನಾವು ನಮ್ಮ ಉದ್ಯೋಗದಲ್ಲಿ ಸಂತೋಷವಾಗಿದ್ದಷ್ಟೂ ಕೌಟುಂಬಿಕವಾಗಿ, ಹಾಗೆಯೇ ಕುಟುಂಬದಲ್ಲಿ ಸಂತೋಷವಾಗಿದ್ದಷ್ಟೂ ನಮ್ಮ ಕೆಲಸದಲ್ಲಿ ಸಂತಸವಾಗಿರುತ್ತೇವೆ. ಆದರೆ, ಒತ್ತಡದ ಜೀವನ ನಮ್ಮನ್ನು ಸಂಕಷ್ಟಗಳಿಗೆ ದೂಡುತ್ತಿದೆ. ತಾಂತ್ರಿಕ ಜಗತ್ತಿನಲ್ಲಿ ಕುಟುಂಬ ಮತ್ತು ಉದ್ಯೋಗ ಕ್ಷೇತ್ರ ಎರಡೂ ಕಡೆ ಹೇಗೆ ಸರಿದೂಗಿಸುತ್ತೇವೆ ಎನ್ನುವುದು ಮುಖ್ಯ ಎಂದು ಸಲಹೆ ನೀಡಿದರು.

ಅಂಕಣಕಾರ ಹಾಗೂ ಚಿಂತಕ ನಾ.ದಿವಾಕರ ಮಾತನಾಡಿ, ವೃದ್ಧರು ಪ್ರಸ್ತುತ ತಾಂತ್ರಿಕ ಜಗತ್ತಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ. ತಾಂತ್ರಿಕತೆಯಿಂದ ಅನಾನುಕೂಲಗಳು ಹೆಚ್ಚಿದಂತೆಯೂ ಉಪಯೋಗಗಳೂ ಆಗಿವೆ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜಾಗತೀಕ ಮಟ್ಟದಲ್ಲಿ ಸಾಕಷ್ಟು ಹೊಸ ಪ್ರಯೋಗಗಳೂ ಆಗಿವೆ ಶ್ಲಾಘಿಸಿದರು.
ಮದ್ರಾಸ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಡಾ.ಎಸ್.ಕರುಣಾನಿಧಿ ‘ಉದ್ಯೋಗ ಜೀವನ ಮತ್ತು ಯೋಗಕ್ಷೇಮದ ಮೇಲೆ ಡಿಜಿಟಲೀಕರಣದ ಪರಿಣಾಮಗಳು’ ಕುರಿತು ಉಪನ್ಯಾಸ ನೀಡಿದರು. ಮೈಸೂರು ವಿವಿ ಡಿಂಟಿಕೇಟ್ ಸದಸ್ಯ ಡಾ.ಜಿ.ವೆಂಕಟೇಶ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

× Chat with us