ಅಮಿರ್‌ ಖಾನ್‌-ಕಿರಣ್‌ ರಾವ್‌ ದಂಪತಿ ಮಕ್ಕಳು ಯಾಕೆ ಮುಸ್ಲಿಂ ಆಗಿದ್ದಾರೆ: ಕಂಗನಾ ಪ್ರಶ್ನೆ

ಹೊಸದಿಲ್ಲಿ: ಬಾಲಿವುಡ್‌ ಸ್ಟಾರ್‌ ಅಮಿರ್‌ ಖಾನ್‌ ಮತ್ತು ಕಿರಣ್‌ ರಾವ್‌ ವಿಚ್ಛೇದನ ಪಡೆದಿರುವುದು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ನಡುವೆಯೇ ನಟಿ ಕಂಗನಾ ರಣಾವತ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್‌ ಮತ್ತಷ್ಟು ಚರ್ಚೆ ಹುಟ್ಟು ಹಾಕಿದೆ.

ʻಅಮಿರ್​ ಖಾನ್ ಮುಸ್ಲಿಂ, ಕಿರಣ್​ ರಾವ್​ ಹಿಂದೂ. ಇವರಿಬ್ಬರಿಗೆ ಜನಿಸಿದ ಪುತ್ರ ಆಜಾದ್​ ರಾವ್​ ಖಾನ್​ ಯಾಕೆ ಮುಸ್ಲಿಂ ಆಗಿ ಮುಂದುವರಿಯುತ್ತಿದ್ದಾನೆ ಎಂದು ಕಂಗನಾ ಪ್ರಶ್ನಿಸಿದ್ದಾರೆ.

ಕಂಗನಾ ತಮ್ಮ ಇನ್‌ಸ್ಟಾ ಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ಹೇಳಿಕೆ ವೈರಲ್‌ ಆಗಿದ್ದು, ‘ಒಂದು ಕಾಲದಲ್ಲಿ ಪಂಜಾಬ್​ನ ಬಹುತೇಕ ಕುಟುಂಬಗಳು ಒಬ್ಬ ಮಗನನ್ನು ಸಿಖ್​ ಆಗಿ, ಇನ್ನೊಬ್ಬ ಮಗನನ್ನು ಹಿಂದೂ ಆಗಿ ಬೆಳೆಸುತ್ತಿದ್ದರು. ಆದರೆ, ಹಿಂದೂ-ಮುಸ್ಲಿಂ ಅಥವಾ ಮುಸ್ಲಿಂ ಜೊತೆ ಮದುವೆಯಾದ ಯಾರಲ್ಲೂ ಈ ಪ್ರವೃತ್ತಿ​ ಕಾಣಿಸುವುದಿಲ್ಲ ಯಾಕೆ? ಆಮಿರ್​ ಖಾನ್​ ಅವರ ವಿಚ್ಛೇದನದ ವಿಚಾರದಲ್ಲಿ ನನಗೆ ಅಚ್ಚರಿ ಆಗಿದ್ದೇನೆಂದರೆ, ಇಂಥ ಅಂತರಧರ್ಮೀಯ ಮದುವೆಯಲ್ಲಿ ಮಕ್ಕಳು ಮುಸ್ಲಿಂ ಆಗಿಯೇ ಮುಂದುವರಿಯುತ್ತಾರೆ ಯಾಕೆ?’ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.

‘ಮಹಿಳೆ ಯಾಕೆ ಹಿಂದೂ ಆಗಿ ಮುಂದುವರಿಯಲು ಸಾಧ್ಯವಿಲ್ಲ. ಬದಲಾದ ಕಾಲದಲ್ಲಿ ಇದನ್ನೂ ನಾವು ಬದಲಾಯಿಸಬೇಕು. ಇದು ತುಂಬ ಹಳೆಯ ಮತ್ತು ಜಡವಾದ ಪದ್ಧತಿ. ಒಂದೇ ಕುಟುಂಬದಲ್ಲಿ ಹಿಂದೂಗಳು, ಸಿಖ್​, ಬೌದ್ಧರು, ಜೈನರು ಜೊತೆಯಾಗಿ ಇರಲು ಸಾಧ್ಯ ಎಂಬುದಾದರೆ ಮುಸ್ಲಿಮರು ಕೂಡ ಜೊತೆಯಾಗಿ ಇರಲು ಯಾಕೆ ಸಾಧ್ಯವಿಲ್ಲ? ಮುಸ್ಲಿಮರ ಜೊತೆ ಮದುವೆ ಆದವರು ತನ್ನ ಮೂಲ ಧರ್ಮವನ್ನು ಯಾಕೆ ಬದಲಾಯಿಸಿಕೊಳ್ಳಬೇಕು’ ಎಂದು ಕೇಳಿದ್ದಾರೆ.

15 ವರ್ಷಗಳ ಸುಖಿ ದಾಂಪತ್ಯದ ನಂತರ ನಟ ಅಮಿರ್‌ ಖಾನ್‌ ಮತ್ತು ಕಿರಣ್‌ ರಾವ್‌ ದಂಪತಿ ಈಚೆಗೆ ವಿಚ್ಛೇದನ ಘೋಷಿಸಿಕೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

× Chat with us