ಬೆಂಗಳೂರು: ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಜನರಿಗೆ ಭಾರೀ ವಂಚನೆ ಮಾಡಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಂಕಿ-ಅಂಶಗಳ ಸಹಿತ ಗಂಭಿರ ಆರೋಪ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೊಮ್ಮಾಯಿಯವರ ನೇತೃತ್ವದ ರಾಜ್ಯ ಮತ್ತು ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಗಳು ಸೇರಿಕೊಂಡು ಕಳೆದ 6 ತಿಂಗಳಲ್ಲಿ ನೂರಾರು ಕೋಟಿಯ ಜಾಹಿರಾತುಗಳನ್ನು ಬಿಡುಗಡೆ ಮಾಡಿವೆ. ಡಬಲ್ ಎಂಜಿನ್ ಸರ್ಕಾರ ಬಂದರೆ ಕರ್ನಾಟಕ ಸ್ವರ್ಗ ಸಮಾನವಾಗಿ ಬಿಡುತ್ತದೆ ಎಂದು ನಂಬಿಸಲು ಭಾಷಣಗಳು ಮತ್ತು ಜಾಹಿರಾತುಗಳ ಆಶ್ರಯ ಪಡೆದಿದ್ದ ಬಿಜೆಪಿಗರು ಎಲ್ಲ ರಂಗದಲ್ಲೂ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಅವರು ತಮ್ಮ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಬೊಮ್ಮಾಯಿಯವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ 2022-23 ರಲ್ಲಿ ಬಜೆಟ್‍ನಲ್ಲಿ ಘೋಷಿಸಿದ್ದನ್ನು ಸಾಧಿಸಲು ಇದ್ದ ಅವಕಾಶ ಇದೇ ಮಾರ್ಚ್ 31 ಕ್ಕೆ ಮುಗಿಯಿತು. ರಾಜ್ಯ ಸರ್ಕಾರದ ಸಾಧನೆಗಳೇನು ಎಂಬುದನ್ನು ಈಗ ಸರ್ಕಾರದ ದಾಖಲೆಗಳೇ ಹೇಳುತ್ತಿವೆ.
ಅದರಲ್ಲೂ ಮುಖ್ಯವಾಗಿ ಕೇಂದ್ರ- ರಾಜ್ಯ ಸರ್ಕಾರಗಳೆರಡೂ ಸೇರಿ ಅನುಷ್ಠಾನ ಮಾಡುವ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಡಬಲ್ ಎಂಜಿನ್ ಸರ್ಕಾರ ದಯನೀಯವಾಗಿ ಮಣ್ಣುಪಾಲು ಮಾಡಿದೆ ಎಂದು ಟೀಕಿಸಿದ್ದಾರೆ.
ಮೋದಿಯವರಾಗಲಿ ಅಥವಾ ಬಿಜೆಪಿಯ ಬೇರೆ ಯಾರೆ ನಾಯಕರಾಗಲಿ ಏನು ಹೇಳುತ್ತಾರೊ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸತ್ಯ ಅಡಗಿದೆ. ಬಿಜೆಪಿ ಸರ್ಕಾರಗಳು ಸಂಪೂರ್ಣವಾಗಿ ಕರ್ನಾಟಕಕ್ಕೆ ದ್ರೋಹ ಬಗೆದಿವೆ. ಮಾರ್ಚ್ 31 ರವರೆಗೆ ಬಿಡುಗಡೆ ಮಾಡಿ ಖರ್ಚು ಮಾಡಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ 23735 ಕೋಟಿ ರೂ ಮಾತ್ರ.
ಖರ್ಚು ಮಾಡುವುದಾಗಿ ಹೇಳಿದ್ದ ಮೊತ್ತ 47557 ಕೋಟಿ ರೂಪಾಯಿ. ಅದರಲ್ಲಿ ಹಿಂದಿನ ವರ್ಷದ ಬಾಕಿ ಮೊತ್ತ 9041 ಕೋಟಿ ರೂಗಳು ಸೇರಿದ್ದವು. ಡಬಲ್ ಎಂಜಿನ್ ಸರ್ಕಾರಗಳ ಸಾಧನೆ ಶೇ.49.9 ರಷ್ಟು ಮಾತ್ರ ಎಂದು ವಿವರಿಸಿದ್ದಾರೆ.
ಮಾತಿಗೆ ಮೊದಲು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುವ ಮೋದಿ ಮತ್ತು ಅಮಿತ್ ಶಾ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಬೇಕಿದೆ. ಕಳೆದ ವರ್ಷದ ಬಜೆಟ್‍ನಲ್ಲಿ ರಾಜ್ಯಕ್ಕೆ 21435 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಮಾರ್ಚ್ 31 ಕ್ಕೆ ಬಿಡುಗಡೆ ಮಾಡಿದ ಒಟ್ಟು ಮೊತ್ತ 13339 ಕೋಟಿ.ರೂ ಮಾತ್ರ. ಮೊದಲನೆಯದಾಗಿ ಬಿಡುಗಡೆ ಮಾಡುತ್ತೇವೆಂದು ಹೇಳಿರುವುದೇ ಕಡಿಮೆ. ಹೇಳಿದ ಮೇಲೆ ಬಿಡುಗಡೆ ಮಾಡಿರುವುದು ಇನ್ನೂ ಕಡಿಮೆ. ನಿಮ್ಮ ಈ ಅವಮಾನ ಮತ್ತು ದ್ರೋಹವನ್ನು ಕರ್ನಾಟಕದ ಜನ ಯಾಕೆ ಸಹಿಸಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕರ್ನಾಟಕದಿಂದ 4.75 ಲಕ್ಷ ಕೋಟಿ ರೂಗಳಿಗೂ ಹೆಚ್ಚು ತೆರಿಗೆ ಮತ್ತು ಸುಂಕಗಳನ್ನು ಲೂಟಿ ಹೊಡೆಯುವ ನೀವು ನಮಗೆ ವಾಪಸ್ಸು ಕೊಡುತ್ತಿರುವುದು ಬರೀ ಭಾಷಣ ಮತ್ತು ಸುಳ್ಳು ಜಾಹಿರಾತುಗಳು ಮಾತ್ರ. ಮನಮೋಹನಸಿಂಗ್ ಪ್ರಧಾನ ಮಂತ್ರಿಯಿದ್ದಾಗ ಕೇಂದ್ರ ಸರ್ಕಾರ ಶೇ.75 ರಷ್ಟು ಅನುದಾನವನ್ನು ಕೊಡುತ್ತಿತ್ತು. ರಾಜ್ಯ ಸರ್ಕಾರ ಶೇ.25 ರಷ್ಟು ಮ್ಯಾಚಿಂಗ್ ಗ್ರ್ಯಾಂಟ್ ಕೊಡುತ್ತಿತ್ತು. ಹಾಗಾಗಿಯೆ ಈ ಯೋಜನೆಗಳಿಗೆ ಕೇಂದ್ರ ಪುರಸ್ಕøತ ಯೋಜನೆಗಳು ಎಂದು ಕರೆಯುವುದು.
ಮೋದಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರ ಶೇ.55 ರಷ್ಟು ಕೊಡುತ್ತಿದೆ ಕೇಂದ್ರ ಸರ್ಕಾರ ಶೇ.45 ರಷ್ಟು ಕೊಟ್ಟು ಮೋಸ ಮಾಡುತ್ತಿದೆ. ದುಡ್ಡು ರಾಜ್ಯದ ಜನರದ್ದು ಹೆಸರು ಮಾತ್ರ ಮೋದಿ ಸರ್ಕಾರದ್ದು. ಇದಕ್ಕಿಂತ ಬೇರೆ ಮೋಸ ಯಾವುದಾದರೂ ಇದೆಯೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದವರೇ ಆಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ, ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾಕರಂದ್ಲಾಜೆ ಅವರ ಇಲಾಖೆಗಳಿಂದಲೂ ರಾಜ್ಯಕ್ಕೆ ನ್ಯಾಯ ದೊರಕಿಲ್ಲ. ಪರಿಶಿಷ್ಟ ಜಾತಿ ಜನರ ಕಲ್ಯಾಣಗಳ ಬಗ್ಗೆ ಭಾರೀ ಪ್ರಚಾರ ಪಡೆಯಲಾಗುತ್ತಿದೆ.
ಆದರೆ ವಾಸ್ತವಾಂಶವೇ ಬೇರೆ ಇದೆ. 2022-23 ಕ್ಕೆ ಸಂಬಂಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ರೂ.597 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು.
ಮಾರ್ಚ್ 2023 ರ ಅಂತ್ಯಕ್ಕೆ ಬಿಡುಗಡೆ ಮಾಡಿದ್ದು ಕೇವಲ ರೂ.121 ಕೋಟಿ ಮಾತ್ರ. ಅದರಲ್ಲಿ ಪ್ರಧಾನ ಮಂತ್ರಿ ಅಭ್ಯುದಯ ಯೋಜನೆಗೆ (ಪಿ.ಎಂ.ಅಜಯ್) ರೂ.200 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ ರೂ.121 ಕೋಟಿ ಬಿಡುಗಡೆ ಮಾಡಬೇಕಾಗಿತ್ತು.
ಬಿಡುಗಡೆ ಮಾಡಿದ್ದು ಕೇವಲ ರೂ.49 ಕೋಟಿ ಮಾತ್ರ. ಪರಿಶಿಷ್ಟ ಪಂಗಡದ ಪ್ರೀ-ಮೆಟ್ರಿಕ್ ವಿದ್ಯಾರ್ಥಿಗಳಿಗೆ ರೂ.16 ಕೋಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿ, ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಅಸ್ಪಶ್ಯತೆ ನಿವಾರಣೆಗಾಗಿ ರೂ.35 ಕೋಟಿ ಬಿಡುಗಡೆ ಮಾಡುತ್ತೇವೆಂದು ಹೇಳಿ, ಬಿಡುಗಡೆ ಮಾಡಿದ್ದು ರೂ.8.75 ಕೋಟಿ ಮಾತ್ರ. ವರ್ಷದ ಕೊನೆಗೆ ಶೇ.32 ರಷ್ಟು ಪ್ರಗತಿಯಾಗಿದೆ ಎಂದು ವಿವರಿಸಿದ್ದಾರೆ.
ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ರೂ.19.25 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿ ನೀಡಿದ್ದು, 9.38 ಕೋಟಿ ರೂಪಾಯಿ ಮಾತ್ರ. ವರ್ಷದ ಕೊನೆಗೆ ಶೇ.13 ರಷ್ಟು ಪ್ರಗತಿಯಾಗಿದೆ ಎಂದಿದ್ದಾರೆ.
ಕೃಷಿ ಇಲಾಖೆಯಲ್ಲಿ ರೂ.613 ಕೋಟಿ ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ ರೂ.426 ಕೋಟಿ. ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರೂ.105 ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ ರೂ.73 ಕೋಟಿ ಮಾತ್ರ ಕೊಟ್ಟಿದೆ. ಆದರೆ ಮಾತಿನಲ್ಲಿ ಮಾತ್ರ ಮೀನುಗಾರರು ಮತ್ತು ಪಶು ಸಂಗೋಪನೆ ¨ಬಗ್ಗೆ ಇನ್ನಿಲ್ಲದಂತೆ ಮಂತ್ರದಲ್ಲೆ ಮಾವಿನಕಾಯಿ ಉದುರಿಸಲಾಗಿದೆ.
ಯುವಕರಿಗೆ ಉದ್ಯೋಗ ನೀಡುವ ಕೌಶಲ್ಯಾಭಿವೃದ್ಧಿ ಇಲಾಖೆಗೆ ನೀಡಿದ್ದ ಭರವಸೆಯಲ್ಲಿ ಅರ್ಧಷ್ಟು ಈಡೇರಿಸಿಲ್ಲ. ಅರಣ್ಯ ಮತ್ತು ಪರಿಸರ ಇಲಾಖೆ, ರೂ.80 ಕೋಟಿ ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ ರೂ.25 ಕೋಟಿ. ಆದರೆ ಇದೆ ಏಪ್ರಿಲ್ 9 ರಂದು ಬಂಡೀಪುರದ ಸಫಾರಿಗೆ ಬರುತ್ತೇನೆಂದು ಮೋದಿ ಹೇಳಿದ್ದಾರೆಂದು ರಾಜ್ಯ ಸರ್ಕಾರ ಹೇಳುತ್ತಿದೆ.
ಬಂಡೀಪುರದ ಅರಣ್ಯವನ್ನು ಅದಾನಿ-ಅಂಬಾನಿಗಳಿಗೆ ಕೊಡದಿದ್ದರೆ ಸಾಕು. ಆನೆ, ಚಿರತೆಗಳ ಬಗ್ಗೆ ಮತ್ತು ಮರಗಳ ಬಗ್ಗೆ ಕಾಳಜಿ ತೋರಿಸುವ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ಸ್ಯಾಂಕಿ ಕೆರೆ ಮೇಲಿನ ಮರಗಳನ್ನು ಕಡಿಯಬಾರದೆಂದು ಪ್ರತಿಭಟನೆ ಮಾಡಿದ್ದ ಪರಿಸರವಾದಿಗಳ ಮೇಲೆ ಕ್ರಿಮಿನಲ್ ಕೇಸ್‍ಗಳನ್ನು ದಾಖಲಿಸಿದೆ, ಇದರಿಂದ ಬಿಜೆಪಿ ಸರ್ಕಾರ ಮಾಡುವುದೊಂದು, ಹೇಳುವುದೊಂದು ಎಂದು ಲೇವಡಿ ಮಾಡಿದ್ದಾರೆ.
ಆರೋಗ್ಯ, ನಗರಾಭಿವೃದ್ಧಿ ಸೇರಿ ಎಲ್ಲಾ ಇಲಾಖೆಗಳಲ್ಲೂ ಇದೇ ರೀತಿಯ ದ್ರೋಹ ಮಾಡಲಾಗಿದೆ. ತಮಗೆ ಸಿಕ್ಕ ಅಧಿಕಾರವನ್ನು ಕೇವಲ ಭ್ರಷ್ಟಾಚಾರಕ್ಕೆ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಬಳಸಿಕೊಂಡು ಜನರ ಕಲ್ಯಾಣಕ್ಕೆ ಮಣ್ಣೆರಚಿ ಅವಮಾನ ಮಾಡಿದೆ. ಈ ಮೂಲಕ ಅಧಿಕಾರ ನಡೆಸಲು ಅಸಮರ್ಥರು ಎಂಬುದನ್ನು ಸಾಬೀತು ಪಡಿಸಿದೆ ಎಂದು ಆರೋಪಿಸಿದ್ದಾರೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…