BREAKING NEWS

ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್‌) ನಿಯಮಿತದ ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ವಿರೂಪಾಕ್ಷಪ್ಪ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಕೆ.ಸುಮನ್, ‘ಎಫ್ಐಆರ್‌ನಲ‌್ಲಿ ಅರ್ಜಿದಾರರ ವಿರುದ್ಧದ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಟೆಂಡರ್‌ಗೆ ಲಂಚ ನೀಡುವಂತೆ 30 ರಷ್ಟು ಕಮಿಷನ್ ಬೇಡಿಕೆ ಇಟ್ಟಿರುವ ಬಗ್ಗೆಯಾಗಲೀ, ಅದಕ್ಕಾಗಿ ಪ್ರಯತ್ನ ನಡೆಸಿರುವುದಾಗಲೀ ಅಥವಾ ನಿರ್ದಿಷ್ಟ ದಿನದಂದು ಲಂಚ ಕೊಡುವಂತೆ ಕೇಳಿದ ಬಗ್ಗೆಯಾಗಲೀ ಇನಿತೂ ಸಾಕ್ಷಿ ಇಲ್ಲ. ಅರ್ಜಿದಾರರು ಮತ್ತು ಲಂಚ ಪಡೆದ ಆರೋಪ ಎದುರಿಸುತ್ತಿರುವ ಪುತ್ರ ಪ್ರಶಾಂತ್‌ ಅವರಿಗೂ ಈ ವಿಚಾರದಲ್ಲಿ ಸಂಬಂಧವಿಲ್ಲ. ವಿರೂಪಾಕ್ಷಪ್ಪ ಅವರಿಗೀಗ 75 ವರ್ಷ. ನಾಲ್ಕು ಬಾರಿ ಶಾಸಕರು. ಮೇಲಾಗಿ ಹೃದಯ ಸಂಬಂಧಿತ ಸಮಸ್ಯೆ ಹೊಂದಿದ್ದಾರೆ. ವಿಚಾರಣೆಗೆ ಹಾಜರಾದರೆ ಲೋಕಾಯುಕ್ತ ಪೊಲೀಸರು ಬಂಧಿಸುವ ಭೀತಿ ಇದೆ. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬೇಕು’ ಎಂದು ಮನವಿ ಮಾಡಿದರು.

ವಿಳಂಬ: ಮಧ್ಯಾಹ್ನದ 12 ಗಂಟೆ ವೇಳೆಗೆ ಪ್ರಕರಣದ ವಿಚಾರಣೆ ಆರಂಭವಾಯಿತು. ಈ ವೇಳೆ ಪ್ರತಿವಾದಿ ಪ್ರಾಸಿಕ್ಯೂಷನ್‌ ಲೋಕಾಯುಕ್ತ ಪರ ಹಾಜರಾಗಬೇಕಿದ್ದ ಬಿ.ಬಿ.ಪಾಟೀಲ ಅವರು ತಡವಾಗಿ ಹಾಜರಾಗಿದ್ದು ವಿಶೇಷವಾಗಿತ್ತು. ನ್ಯಾಯಮೂರ್ತಿಗಳು ಆದೇಶದ ಅಂತಿಮ ಸಾಲುಗಳ ಉಕ್ತಲೇಖನ ನೀಡುವಾಗ ಪಾಟೀಲ ಅವರು ಗಡಿಬಿಡಿಯಲ್ಲಿ ಕೋರ್ಟ್ ಹಾಲ್‌ ಪ್ರವೇಶಿಸಿದರು.

ಇದಕ್ಕೂ ಮೊದಲು, ‘ಅರ್ಜಿದಾರರ ವಾದಕ್ಕೆ ಏನು ಉತ್ತರ ನೀಡುತ್ತೀರಿ’ ಎಂದು ನ್ಯಾಯಪೀಠ ಪ್ರಾಸಿಕ್ಯೂಷನ್‌ ಕಡೆ ತಿರುಗಿ ಪ್ರಶ್ನಿಸಿದಾಗ ಹಾಜರಿದ್ದ ಪಾಟೀಲ ಅವರ ಕಚೇರಿಯ ಕಿರಿಯ ವಕೀಲರು, ‘ನಮಗಿನ್ನೂ ಅರ್ಜಿದಾರರು ಕಾಪಿ ಸರ್ವ್‌ ಮಾಡಿಲ್ಲ. ತನಿಖಾಧಿಕಾರಿಯಿಂದ ಹೆಚ್ಚಿನ ವಿವರಣೆ ಪಡೆಯಬೇಕಿದೆ’ ಎಂದಷ್ಟೇ ಉತ್ತರಿಸಿದ್ದರು.

ಉಭಯತ್ರರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣದ ಕುರಿತು ಆಕ್ಷೇಪಣೆ ಸಲ್ಲಿಸಲು ಮತ್ತು ತನಿಖಾಧಿಕಾರಿಯಿಂದ ಅಗತ್ಯ ಸಲಹೆ ಸೂಚನೆ ಪಡೆಯಲು ಕಾಲಾವಕಾಶ ನೀಡುವಂತೆ ಲೋಕಾಯುಕ್ತ ಪರ ವಕೀಲರು ಕೋರಿದ್ದಾರೆ. ಹಾಗಾಗಿ, ಲೋಕಯುಕ್ತ ಪೊಲೀಸರು ದಾಖಲೆ ಸಲ್ಲಿಸುವರೆಗೂ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗುತ್ತಿದೆ’ ಎಂದು ತಿಳಿಸಿತು.

‘ಅರ್ಜಿದಾರ ಆರೋಪಿಯನ್ನು ಬಂಧಿಸಿದರೆ 5 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು. ಪ್ರತ್ಯಕ್ಷವಾಗಿಯಾಗಲೀ ಅಥವಾ ಅಪ್ರತ್ಯಕ್ಷ ರೀತಿಯಲ್ಲಾಗಲೀ ಪ್ರಕರಣದ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಬಾರದು. ಈ ಆದೇಶದ ಪ್ರತಿ ಲಭ್ಯವಾದ 48 ಗಂಟೆಗಳಲ್ಲಿ ತನಿಖಾಧಿಕಾರಿ ಮುಂದೆ ಶರಣಾಗಬೇಕು. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ನ್ಯಾಯಾಲಯದ ಮುಂದಿನ ಆದೇಶದವರೆಗೆ ಕೆಎಸ್‌ಡಿಎಲ್‌ಗೆ ಕಚೇರಿಗೆ ಅರ್ಜಿದಾರರು ಹೋಗಬಾರದು’ ಎಂಬ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಪ್ರತಿವಾದಿ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 17 ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ‘ನನ್ನ ವಿರುದ್ಧ ಕಾನೂನು ಬಾಹಿರವಾಗಿ ಮತ್ತು ಕಿರುಕುಳ ಕೊಡುವ ದುರುದ್ದೇಶದಿಂದ ಎಫ್‌ಐಆರ್ ದಾಖಲು ಮಾಡಲಾಗಿದೆ. ನಾನು ಲಂಚವನ್ನು ಕೇಳಿಯೂ ಇಲ್ಲ ಮತ್ತು ಪಡೆದೂ ಇಲ್ಲ. ಪ್ರಕರಣದಲ್ಲಿ ನನ್ನನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ವಿಚಾರಣೆ ವೇಳೆ ಪೊಲೀಸರು ನನ್ನನ್ನು ಬಂಧಿಸುವ ಭೀತಿ ಇದೆ. ಆದ್ದರಿಂದ, ನನಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಕರಣವೇನು?: ‘ವಿರೂಪಾಕ್ಷಪ್ಪ ಅವರ ಪುತ್ರರೂ ಆದ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳು ಟೆಂಡರ್‌ ಪ್ರಕ್ರಿಯೆಯಲ್ಲಿ 40 ಲಕ್ಷ ಲಂಚ ಪಡೆದಿದ್ದಾರೆ’ ಎಂದು ಆರೋಪಿಸಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಇದೇ 2ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 7 (ಎ) ಮತ್ತು (ಬಿ), 7 ಎ, 8, 9 ಮತ್ತು 10ರ ಅಡಿಯಲ್ಲಿ ದಾಖಲಿಸಿರುವ ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಪ್ರಶಾಂತ್ ಮಾಡಾಳು ಎರಡನೇ ಆರೋಪಿ.

ಷರತ್ತುಗಳು

* ಆರೋಪಿ ವೈಯಕ್ತಿಕ  5 ಲಕ್ಷ ಮೊತ್ತದ ಬಾಂಡ್ ಸಲ್ಲಿಸಬೇಕು.

* ಇಬ್ಬರು ಭದ್ರತೆ ಕೊಡಬೇಕು.

* ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು.

* ತನಿಖೆಗೆ ಸಹಕರಿಸಬೇಕು.

ಮುಂದಿನ ವಿಚಾರಣೆಯನ್ನು ಇದೇ 17ಕ್ಕೆ ನಿಗದಿಡಿಸಲಾಗಿದೆ.

andolanait

Recent Posts

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…

34 mins ago

ಮೈಸೂರು:  ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…

52 mins ago

ಡಿ.ಕೆ.ಸಹೋದರರಿಗೆ ಮದುವೆ ಕರೆಯೋಲೆ ನೀಡಿದ ಡಾಲಿ ಧನಂಜಯ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಅವರಿಗೆ ನೀಡಿ…

59 mins ago

ಶುಚಿತ್ವ, ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡ ಜಯದೇವ :ಸಿ.ಎಂ ಪ್ರಶಂಸೆ

ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…

2 hours ago

ಪ್ರಹ್ಲಾದ್‌ ಜೋಶಿರವರ ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಕೇಂದ್ರ ಸಚಿವ ಸ್ಥಾನಕ್ಕೆ ಶೋಭೆ ತರಲ್ಲ-ಎಚ್‌.ಕೆ.ಪಾಟೀಲ

ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್‌ ಎನ್‌ಕೌಂಟರ್‌ ಹೇಳಿಕೆ…

2 hours ago

ನ್ಯೂ ಇಯರ್‌ ಸೆಲಬ್ರೇಷನ್ | ಬೆಂಗಳೂರು ಪೊಲೀಸರಿಂದ ಹೊಸ ನಿಯಮ

ನ್ಯೂ ಇಯರ್ ಸೆಲಬ್ರೇಷನ್‌ಗೆ ದಿನಗಣನೆ ಬೆಂಗಳೂರು: 2024ನ್ನು ಮುಗಿಸಿ 2025ನ್ನು ಬರಮಾಡಿಕೊಳ್ಳಲು ಸಿಲಿಕಾನ್‌ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯುತ್ತಿದೆ. ಸದ್ಯ…

2 hours ago