ಉಪಚುನಾವಣೆಗೆ ಸರ್ಕಾರಿ ಅಧಿಕಾರಿಗಳಿಂದ ಹಫ್ತಾ ವಸೂಲಿ ಮಾಡ್ತಿದೆ ಬಿಜೆಪಿ: ಲಕ್ಷ್ಮಣ್

ಮೈಸೂರು: ಬಿಜೆಪಿಯವರು ಉಪಚುನಾವಣೆಗೆ ಸರ್ಕಾರಿ ಅಧಿಕಾರಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಈವರೆಗೂ 8 ಇಲಾಖೆಗಳಿಂದ 500 ಕೋಟಿ ರೂ. ಹಣವನ್ನು ಸಂಗ್ರಹಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಬಕಾರಿ ಅಧಿಕಾರಿಗಳಿಂದ ಸರ್ಕಾರ 50 ಲಕ್ಷ ರೂ.,‌ 1 ಕೋಟಿ ರೂ… ಹೀಗೆ ವಿವಿಧ ಮೊತ್ತದ ಹಣವನ್ನು ಪಡೆಯಲಾಗುತ್ತಿದೆ. ಈ ವಿಷಯವನ್ನ ನನ್ನ ಆತ್ಮೀಯ ಅಬಕಾರಿ ಉಪಾಯುಕ್ತರೊಬ್ಬರು ನನ್ನ ಬಳಿ ಬಹಿರಂಗಪಡಿಸಿದ್ದಾರೆ. ಆ ಹಣವನ್ನು ಸರ್ಕಾರಿ ವಾಹನಗಳಲ್ಲೇ ಸಾಗಿಸಿ ಉಪಚುನಾವಣೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗ ಈ ಬಗ್ಗೆ ಕೂಡಲೆ ತನಿಖೆ ನಡೆಸಬೇಕು. ಈ ಕುರಿತು ಆಯೋಗ ಕ್ರಮ ಕೈಗೊಳ್ಳದಿದ್ದರೆ ಜನರು ಚುನಾವಣಾ ಆಯೋಗದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಇದರಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು ಎಲ್ಲರೂ ಭಾಗಿಯಾಗಿದ್ದಾರೆ. ಬಹಳ ವ್ಯವಸ್ಥಿತವಾಗಿ ಈ ಅಕ್ರಮಗಳನ್ನು ನಡೆಸಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಚುನಾವಣಾ ಆಯೋಗದ್ದು ಎಂದು ತಿಳಿಸಿದರು.

ಸಾರಿಗೆ ನೌಕರರ ಮುಷ್ಕರ ಕುರಿತು ಮಾತನಾಡಿ, ಕೆಎಸ್‌ಆರ್‌ಟಿಸಿ ನೌಕರರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮೈಸೂರಿನಲ್ಲಿ ನರ್ಮ್ ಯೋಜನೆಯಡಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣಗಳನ್ನು ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಖಾಸಗಿಯವರಿಗೆ ವಹಿಸಿಬಿಟ್ಟರು. ಈಗ ಕೆಎಸ್‌ಆರ್‌ಟಿಸಿಯನ್ನು ಸಹ ಖಾಸಗೀಕರಣ ಮಾಡುವ ಹುನ್ನಾರ ಬಿಜೆಪಿ ಅವರದ್ದು. ಕೋಡಿಹಳ್ಳಿ ಚಂದ್ರಶೇಖರ್ ಮೋದಿಯವರ ವಿರುದ್ಧ ಇದ್ದಾರೆಂಬ ಕಾರಣಕ್ಕೆ ಅವರನ್ನು ಸಂಧಾನಕ್ಕೂ ಕರೆಯುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಶಿವಣ್ಣ, ಈಶ್ವರ್ ಚಕ್ಕಡಿ, ಗಿರೀಶ್, ಮಹೇಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

× Chat with us