Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮೋದಿ ನೋಡಲಿ ಎಂದು ಬಿಜೆಪಿ ನಾಯಕರು ಬೀದಿಯಲ್ಲಿ ನಿಂತಿದ್ದರು : ದಿನೇಶ್ ಗುಂಡೂರಾವ್

ಗದಗ : ರಾಜ್ಯ ಬಿಜೆಪಿ ಮುಖಂಡರ ಮುಖ ನೋಡಲು ಮೋದಿಯವರಿಗೆ ಅಸಡ್ಡೆಯಾಗಿದೆ. ಮೋದಿ ಬೆಂಗಳೂರಿಗೆ ಬಂದರೆ ಅವರತ್ತ ನೋಡಲೇ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಗದಗ ಜಿಮ್ಸ್ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಯವರು ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಬೀದಿಯಲ್ಲಿ ನಿಂತಿದ್ದರು. ಆದರೆ ಅವರು ಇವರನ್ನು ತಿರುಗಿಯೂ ನೋಡಲಿಲ್ಲ. ಇವರಿಗಾದರೂ ಸ್ವಾಭಿಮಾನ ಇರಬೇಕಲ್ವಾ ಎಂದು ಲೇವಡಿ ಮಾಡಿದರು.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಯಾರು ಬರಬೇಡಿ ಅಂತಾ ಅವರೇ ಹೇಳಿದ್ದರು. ಅದಕ್ಕೆ ನಮ್ಮವರು ಯಾರೂ ಹೋಗಿರಲಿಲ್ಲ. ಬಿಜೆಪಿಯವರು ಹೋಗಿದ್ದರು. ಆದರೆ ಮೋದಿ ಅವರನ್ನು ಕಣ್ಣು ತಿರುಗಿಸಿಯೂ ನೋಡಿಲ್ಲ. ಮೋದಿಯವರನ್ನು ಕರೆಸಿ ಬೀದಿ ಬೀದಿ ಓಡಾಡಿಸಿ ಮಾನ, ಮರ್ಯಾದೆ ತೆಗೆದರು. ಮೋದಿ ಹೆಸರಲ್ಲಿ ವೋಟ್ ಕೇಳಿದರು. ಬಂದಿದ್ದು 60 ಸೀಟ್ ಮಾತ್ರ. ಮೋದಿ ಹೆಸರು ಹಾಳು ಮಾಡಿದ್ದಕ್ಕೆ ಅವರು ಇವರನ್ನು ನೋಡಲಿಲ್ಲ ಎಂದರು.

ಕೋವಿಡ್ ಅಕ್ರಮ ತನಿಖೆ ಬಗ್ಗೆ, ಆಯೋಗ ರಚನೆ ಬಗ್ಗೆ ಗುಡುಗಿದ ಅವರು, ಸಾರ್ವಜನಿಕ ಲೆಕ್ಕ ಪತ್ರ ವರದಿಯನ್ನು ಹಿಂದಿನ ಸರ್ಕಾರ ಸದನಕ್ಕೆ ಒಪ್ಪಿಸಿರಲಿಲ್ಲ. ವರದಿ ಆಧಾರದಲ್ಲಿ ಹಾಗೂ ಬೇರೆ ಬೇರೆ ಮಾಹಿತಿ ಆಧಾರದ ಮೇಲೆ ತನಿಖೆ ಆಗಬೇಕು ಎಂದು ಕೋರಿದ್ದೆವು. ನಿವೃತ್ತ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ ಎಂದು ಹೇಳಿದರು.

ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಈ ಹಿಂದೆ ಆರೋಪ ಮಾಡಿರುವ ಪ್ರಕಾರ ಈಗ ತನಿಖೆ ನಡೆಸಿದ್ದೇವೆ. ಅವರಿಗೆ ಭಯ ಏಕೆ? ತನಿಖೆಯನ್ನು ವಿರೋಧ ಪಕ್ಷಗಳು ಸ್ವಾಗತಿಸಬೇಕು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ಆರೋಪ ಮಾಡಿ ಸುಮ್ಮನಾಗುವುದಲ್ಲ. ಹೇಳಿದಂತೆ ತನಿಖೆ ಮಾಡಿಸುತ್ತಿದ್ದೇವೆ. ಅದೇ ರೀತಿ 40% ಬಿಬಿಎಂಪಿ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!