ಬಿಟ್‌ಕಾಯಿನ್: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿ ಬಿಜೆಪಿ-ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಪ್ರಯತ್ನಗಳು ಮುಂದುವರಿದಿದೆ. ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲಾದರೂ ಆಗಿರಲಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಬೆಂಗಳೂರಿನಲ್ಲಿ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಮ್ಮ ಅವಧಿಯನ್ನೂ ಸೇರಿಸಿ ನ್ಯಾಯಾಂಗ ತನಿಖೆಗೆ ಕೊಡಿ. ಯಾರು ತಪ್ಪು ಮಾಡಿದ್ದಾರೆ ಗೊತ್ತಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿ ಹಗರಣದ ಬಗ್ಗೆ ತನಿಖೆಗೆ ಕೊಡಿ. ರಾಕೇಶ್ ಈಗ ಬದುಕಿಲ್ಲ. ಅದರ ಬಗ್ಗೆ ಮಾತನಾಡಲ್ಲ. ಸತ್ತವರ ಬಗ್ಗೆ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲಾ ಎಂದು ಕಿಡಿಕಾರಿದರು.

ಬಿಜೆಪಿಯವರು ಸುಮ್ಮನೆ ಹಗರಣದ ಬಗ್ಗೆ ಮಾತನಾಡುತ್ತಿದ್ದಾರಾ? ಯಾಕೆ ಎಲ್ಲರೂ ಇದರ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ? ಹಾಗಾದರೆ ಏನೋ ಇದೆ ಅಂತಾಯ್ತಲ್ಲ, ಬೆಂಕಿ ಇಲ್ಲದೆ ಹೊಗೆಯಾಡುತ್ತಾ? ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿರುವುದು ಯಾಕೆ? ಎಂದು ಕೇಳಿದರು.

ಇನ್ನು ಶ್ರೀಕಿ ಬಳಸಿಕೊಂಡು ನಲಪಾಡ್ ಯುವ ಕಾಂಗ್ರೆಸ್ ಚುನಾವಣಾ ವೆಬ್ ಸೈಟ್ ಹ್ಯಾಕ್ ಮಾಡಿಸಿದ್ದರು ಎಂಬ ಗೃಹ ಸಚಿವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಹ್ಯಾಕಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆ ನಡೆಸಲಿ ಎಲ್ಲ ಸತ್ಯವು ಬರಲಿದೆ ಎಂದರು.

ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಯಾರು ತಪ್ಪಿತಸ್ಥರು ಎಂದು ತನಿಖೆ ಮಾಡಿ. ತಪ್ಪಿತಸ್ಥರು ನಾವೋ, ನೀವೋ ಗೊತ್ತಾಗುತ್ತೆ. ಟ್ವೀಟ್ ಮಾಡುವುದರಿಂದ ಸತ್ಯ ಗೊತ್ತಾಗುತ್ತಾ? ಮುಖ್ಯಮಂತ್ರಿಯನ್ನು ಎಲ್ಲಾ ಸಚಿವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈಗಿನ ಮುಖ್ಯಮಂತ್ರಿ ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳಲ್ಲ. ಸಾಕ್ಷಿ ಇಲ್ಲದೆ ಏನನ್ನೂ ಹೇಳಬಾರದು. ಸುಳ್ಳು ಆರೋಪಗಳನ್ನ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

× Chat with us