ಬಿಳಿಗಿರಿರಂಗನಬೆಟ್ಟದಲ್ಲಿ ʻಹಕ್ಕಿ ಹಬ್ಬʼಕ್ಕೆ ಚಾಲನೆ

ಚಾಮರಾಜನಗರ: ಇಂದಿನಿಂದ (ಮಂಗಳವಾರ) ಮೂರು ದಿನಗಳ ಕಾಲ ಬಿಳಿಗಿರಿರಂಗನಬೆಟ್ಟದಲ್ಲಿ ಬಿಆರ್‌ಟಿ ಹುಲಿ ಯೋಜನೆ ವತಿಯಿಂದ ನಡೆಯುವ 7ನೇ ಆವೃತ್ತಿಯ ಕರ್ನಾಟಕ ‘ಹಕ್ಕಿ ಹಬ್ಬ’ಕ್ಕೆ ಚಾಲನೆ ದೊರೆಯಿತು.

ಬಿಳಿಗಿರಿರಂಗನಬೆಟ್ಟದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನಡೆದ ಕರ್ನಾಟಕ ಹಕ್ಕಿಹಬ್ಬದ ವೇದಿಕೆ ಕಾರ್ಯಕ್ರಮವನ್ನು ಶಾಸಕ ಎನ್.ಮಹೇಶ್ ಉದ್ಘಾಟಿಸಿದರು. ಇವರಿಗೆ ವನ್ಯಜೀವಿ ವಿಭಾಗದ ಪಿಸಿಸಿಎಫ್ ಅಜಯ್ ಮಿಶ್ರಾ, ಅರಣ್ಯ ವಿಭಾಗದ ಸರ್ಕಾರದ ಮುಖ್ಯಕಾರ್ಯದರ್ಶಿ ಸಂದೀಪ್ ದಾವೆ, ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್, ಡಿಸಿಎಫ್ ಗಳಾದ ಸಂತೋಷ್ ಕುಮಾರ್, ಏಡುಕುಂಡಲು, ರಮೇಶ್ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕ ಎನ್.ಮಹೇಶ್ ಸೇರಿದಂತೆ ವೇದಿಕೆಯಲ್ಲಿದ್ದ ಎಲ್ಲ ಅರಣ್ಯ ಅಧಿಕಾರಿಗಳು ಹಕ್ಕಿಗಳ ಸ್ಟ್ಯಾಂಪ್ ಬಿಡುಗಡೆ ಮಾಡಿದರು.

ವನ್ಯಜೀವಿ ವಿಭಾಗದ ಪಿಸಿಸಿಎಫ್ ಅಜಯ್ ಮಿಶ್ರಾ ಅವರು ಮಾತನಾಡಿ, ಅಳಿವಿನ ಅಂಚಿನಲ್ಲಿರುವ ಅಪರೂಪದ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸಲು ಹಕ್ಕಿಹಬ್ಬ ಆಚರಣೆ ಪ್ರಮುಖವಾಗಿದೆ. ಬಿಳಿಗಿರಿರಂಗನಬೆಟ್ಟ ಪಶ್ಚಿಮ ಹಾಗೂ ಪೂರ್ವ ಘಟ್ಟಗಳು ಸೇರುವ ಪ್ರದೇಶವಾಗಿದೆ. ಹೀಗಾಗಿ ಇಲ್ಲಿ 250 ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು. ಹೀಗಾಗಿ ಇಲ್ಲಿ ಹಕ್ಕಿಹಬ್ಬವನ್ನು ಹಮ್ಮಿಕೊಳ್ಳಲಾ ಗಿದೆ ಎಂದ ಅವರು, ಹಕ್ಕಿಹಬ್ಬದ ರಾಯಬಾರಿ ಹದ್ದು ಎಂದು ಹೇಳಿದರು.

ಪರಿಸರ ಪ್ರವಾಸೋದ್ಯಮವನ್ನು ಬಲಪಡಿಸುವುದು ಅರಣ್ಯ ಇಲಾಖೆಯ ಬಹುಮುಖ್ಯ ಕಾರ್ಯವಾಗಿದೆ. ಸುಮಾರು 500ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳಿವೆ. ಈ ಪಕ್ಷಿಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಬಹುಮುಖ್ಯವಾಗಿದೆ. ಹೀಗಾಗಿ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸೇರುವ ಪ್ರದೇಶವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ 7ನೇ ಆವೃತ್ತಿಯ ಹಕ್ಕಿಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

× Chat with us