ಜೋ ಬೈಡನ್‌ ಡಿಜಿಟಲ್‌ ಟೀಮ್‌ನಲ್ಲಿ ಭಾರತ ಮೂಲದ ಆಯಿಷಾಗೆ ಪ್ರಮುಖ ಸ್ಥಾನ!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌ ಅವರು ಶ್ವೇತಭವನದ ಡಿಜಿಟಲ್‌ ತಾಂತ್ರಿಕ ಕಚೇರಿಯ ಸದಸ್ಯರನ್ನು ಘೋಷಿಸಿದ್ದು, ಆ ತಂಡದಲ್ಲಿ ಭಾರತ ಮೂಲದ ಆಯಿಷಾ ಶಾ (ಕಾಶ್ಮೀರ) ಪ್ರಮುಖ ಸ್ಥಾನದಲ್ಲಿದ್ದಾರೆ.

ಶ್ವೇತಭವನದ ಡಿಜಿಟಲ್‌ ತಾಂತ್ರಿಕ ಕಚೇರಿಯ ಸಹಭಾಗಿತ್ವ ವ್ಯವಸ್ಥಾಪಕಿಯಾಗಿ ಆಯಿಷಾ ಶಾ ನಿಯೋಜನೆಗೊಂಡಿದ್ದಾರೆ. ಕಚೇರಿಯ ನಿರ್ದೇಶಕರಾದ ರಾಬ್ ಫ್ಲೆಹರ್ಟಿ ಈ ತಂಡದ ಮುಖ್ಯಸ್ಥರಾಗಿದ್ದಾರೆ.

ಈ ತಂಡದಲ್ಲಿ ಬ್ರೆಂಡನ್‌ ಕೊಹೆನ್‌ (ವೇದಿಕೆ ವ್ಯವಸ್ಥಾಪಕ), ಮಹ ಗ್ಯಾಂಡರ್‌ (ಡಿಜಿಟಲ್‌ ಸಹಭಾಗಿತ್ವ ವ್ಯವಸ್ಥಾಪಕ), ಜೊನಾಥನ್ ಹೆಬರ್ಟ್ (ವಿಡಿಯೊ ನಿರ್ದೇಶಕ), ಜೈಮ್ ಲೋಪೆಜ್ (ವೇದಿಕೆ ನಿರ್ದೇಶಕರು), ಕಾರಹ್ನಾ ಮ್ಯಾಗ್ವುಡ್ (ಕ್ರಿಯೇಟಿವ್‌ ನಿರ್ದೇಶಕರು), ಅಬ್ಬೆ ಪಿಟ್ಜರ್ (ವಿನ್ಯಾಸಕರು), ಒಲಿವಿಯಾ ರೈಸ್ನರ್ (ಪ್ರಯಾಣ ಸಂಪರ್ಕ ನಿರ್ದೇಶಕರು), ರೆಬೆಕಾ ರಿಂಕೆವಿಚ್ ಮತ್ತು ಕ್ರಿಶ್ಚಿಯನ್ ಟಾಮ್ (ಡಿಜಿಟಲ್‌ ತಾಂತ್ರಿಕದ ಉಪನಿರ್ದೇಶಕರು), ಕ್ಯಾಮರೂನ್ ಟ್ರಿಂಬಲ್ (ಡಿಜಿಟಲ್‌ ಮ್ಯಾನೇಜ್‌ಮೆಂಟ್‌ ನಿರ್ದೇಶಕರು) ಇದ್ದಾರೆ.

ಲೂಸಿಯಾನದಲ್ಲಿ ಬೆಳೆದ ಆಯಿಷಾ ಶಾ ಅವರು ಈ ಹಿಂದೆ ಬಿಡನ್-ಹ್ಯಾರಿಸ್‌ ಅಭಿಯಾನದಲ್ಲಿ ಡಿಜಿಟಲ್‌ ಸಹಭಾಗಿತ್ವ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಸ್ಮಿತ್‌ಸೋನಿಯಾ ಸಂಸ್ಥೆಯಲ್ಲಿ ಅಡ್ವಾನ್ಸ್‌ಮೆಂಟ್‌ ಸ್ಪೆಷಲಿಸ್ಟ್‌ ಆಗಿದ್ದಾರೆ. ಅಲ್ಲದೇ, ಜಾನ್‌ ಎಫ್‌ ಕೆನಡಿ ಸೆಂಟರ್‌ ಫಾರ್‌ ದಿ ಪರ್ಫಾರ್ಮಿಂಗ್‌ ಆರ್ಟ್‌ನಲ್ಲೂ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದ್ದರು.

× Chat with us