ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರೂ ಎಚ್ಚರಿಕೆ ಇರಲಿ: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಸಲಹೆ

ಹೊಸದಿಲ್ಲಿ: ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಮೈಮರೆಯುವುದು ಬೇಡ. ವ್ಯಾಕ್ಸಿನ್ ಪಡೆದಿದ್ದರೂ ಎಲ್ಲರೂ ಎಚ್ಚರಿಕೆಯಿಂದ ಇರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.

ಪ್ರತಿ ತಿಂಗಳ ಕೊನೆ ಭಾನುವಾರದ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ 62 ಕೋಟಿಗೂ ಹೆಚ್ಚು ಕೊರೊನಾ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಆದಾಗ್ಯೂ ನಾವು ಜಾಗರೂಕರಾಗಿರಬೇಕು. ಉಳಿದವರೂ ಕೂಡ ಲಸಿಕೆ ಹಾಕಿಸಿಕೊಳ್ಳಬೇಕೆಂದು ಅವರು ಸಲಹೆ ಮಾಡಿದರು.

ಯುವ ಪೀಳಿಗೆ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ. ಇಂದಿನ ಯುವ ಮನಸ್ಸು ಹೊಸದನ್ನು ಮಾಡಲು ಬಯಸುತ್ತದೆ. ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಿದ ನಂತರ, ಅನೇಕ ಯುವಕರು ಅದರ ಬಗ್ಗೆ ಆಸಕ್ತಿಯೊಂದಿಗೆ ಮುಂದೆ ಬಂದಿದ್ದಾರೆ. ಇಂದು, ಸ್ಟಾರ್ಟ್ ಅಪ್ ಸಂಸ್ಕೃತಿಯು ಸಣ್ಣ ಪಟ್ಟಣಗಳಲ್ಲಿಯೂ ವಿಸ್ತರಿಸುತ್ತಿದೆ ಮತ್ತು ಅದರಲ್ಲಿ ಉಜ್ವಲ ಭವಿಷ್ಯದ ಚಿಹ್ನೆಗಳನ್ನು ನಾವು ನೋಡಲಿದ್ದೇವೆ ಎಂದು ಮೋದಿ ಹೇಳಿದರು. .

ನಾವು ಪ್ರತಿದಿನ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ಹೊಸದನ್ನು ಯೋಚಿಸಬೇಕು ಮತ್ತು ಹೊಸದಕ್ಕಾಗಿ ನಮ್ಮ ಉತ್ಸಾಹವನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ತಿಳಿಸಿದರು.

× Chat with us