ನಂಬಿ ಕೆಟ್ಟವರಿದ್ದಾರೆ

ತಾಯಂದಿರ ಉಳಿತಾಯ ದೋಚುವ ಖದೀಮರಿದ್ದಾರೆ ಎಚ್ಚರ! ಸಹಕಾರ ಸಂಘಗಳು, ಫೈನಾನ್ಸ್ ಕಂಪೆನಿಗಳು, ಚೀಟಿದಾರರ ಸೋಗಿನಲ್ಲಿ ಬಂದವರು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಗತ್ಯ ಎಚ್ಚರ ವಹಿಸುವುದು ಮುಖ್ಯವಾಗಿದೆ.

ಧಾತ್ರಿ ಭಾರದ್ವಾಜ್

ನಿಸರ್ಗ ಕೊಡುಗೆಯಾಗಿ ಕೊಟ್ಟ ಈ ಪ್ರಪಂಚದಲ್ಲಿ ಬದುಕಲೂ ಹಣ ಪಾವತಿಸುತ್ತಿರುವ ಏಕೈಕ ಪ್ರಾಣಿ ಮನುಷ್ಯ. ಹಾಗೇ ಹಣಕ್ಕಾಗಿ ಮೋಸ ಮಾಡುವ, ಹಣದಿಂದ ಮೋಸ ಹೋಗುವ ಏಕೈಕ ಪ್ರಾಣಿಯೂ ಮನುಷ್ಯ.
ಬದುಕಲು ಅನ್ನ, ನೀರು, ಗಾಳಿಯಷ್ಟೇ ಮುಖ್ಯ ಹಣ. ದೈನಂದಿನ ಖರ್ಚಿಗೆ ಮಾತ್ರವಲ್ಲದೆ ತುರ್ತು ಪರಿಸ್ಥಿತಿಗಳಲ್ಲಿ ಬಳಸಲು ಕೂಡ ಒಂದಷ್ಟು ಹಣ ಇರಲೇಬೇಕು. ಅದಕ್ಕೆ ಉಳಿತಾಯ ಬಹುಮುಖ್ಯ. ಹಣ ಉಳಿತಾಯ ಮಾಡಲು ವಿವಿಧ ದಾರಿಗಳಿವೆ. ಹಣ ಉಳಿಸಲು ಠೇವಣಿ ಇಟ್ಟು ಬಡ್ಡಿ ಪಡೆಯುವ ಪದ್ಧತಿಯೂ ಉಂಟು. ಆದರೆ ದುರದೃಷ್ಟವಶಾತ್ ಠೇವಣಿ ಪಡೆದು ಬಡ್ಡಿ ನೀಡುತ್ತೇವೆ ಎನ್ನುವ ಎಷ್ಟೋ ಖಾಸಗಿ ಸಂಸ್ಥೆಗಳು ಜನರು ಕಷ್ಟಪಟ್ಟು, ಬೆವರು ಹರಿಸಿ ದುಡಿದ ಹಣವನ್ನು ನುಂಗಿಹಾಕಿ ನಾಪತ್ತೆಯಾಗಿವೆ. ಈ ಬಗ್ಗೆ ಅರಿವು ಅಗತ್ಯ.

ಹೇಗೆ ನಡೆಯುತ್ತದೆ ವಂಚನೆ?

ಸಹಕಾರ ಸಂಘಗಳು, ಫೈನಾನ್ಸ್ ಕಂಪೆನಿಗಳು, ಚೀಟಿದಾರರ ಸೋಗಿನಲ್ಲಿ ಬರುವ ವಂಚಕರು ಕ್ರಮೇಣ ಜನರ ನಂಬಿಕೆ ಗಳಿಸುತ್ತಾರೆ. ನಂತರ ಆಕರ್ಷಕ ಆಫರ್‌ಗಳನ್ನು ಹೇಳಿ, ಅದರ ಉಪಯೋಗಗಳನ್ನು ತಿಳಿಸಿ, ಕಥೆ ಕಟ್ಟಿ ಅವರ ಬಳಿ ಜನರು ಹಣ ಹೂಡಿಕೆ ಮಾಡುವಂತೆ ನೋಡಿಕೊಳ್ಳುತ್ತಾರೆ. ಮೊದಮೊದಲು ಹೆಚ್ಚು ಬಡ್ಡಿ ಹಣ ನೀಡಿ, ಕೆಲವೇ ತಿಂಗಳಿನಲ್ಲಿ ಚೀಟಿ ಹಣ ನೀಡಿ ಗ್ರಾಹಕರ ನಂಬಿಕೆ ಹೆಚ್ಚಾಗುವಂತೆ ಮಾಡುತ್ತಾರೆ. ಆನಂತರ ಸರಿಯಾದ ಸಮಯ ನೋಡಿಕೊಂಡು, ಅವರಿವರ ಹಣ ದೋಚಿಕೊಂಡು ಜಾಗ ಖಾಲಿ ಮಾಡುತ್ತಾರೆ. ಸಾರ್ವಜನಿಕರ ಹಣ ಖೋತಾ ಆಗಿರುತ್ತದೆ.

ತಾಯಂದಿರೇ ವಂಚಕರ ಟಾರ್ಗೆಟ್

ಸಾಮಾನ್ಯವಾಗಿ ಮನೆಯಲ್ಲಿ ಹಣ ಉಳಿತಾಯ ಮಾಡುವವರು ತಾಯಂದಿರು. ಸಾಸಿವೆ ಡಬ್ಬದಿಂದ ಮೊದಲುಗೊಂಡು ಚೀಟಿ, ಬ್ಯಾಂಕ್ ಎಫ್‌ಡಿ ಮತ್ತಿತರ ಸ್ಕೀಂಗಳವರೆಗೂ ವಿವಿಧೆಡೆ ಹಣ ಹೂಡಿಕೆ ಮಾಡಿ ‘ಮುಂದೆ ಯಾವ ಖರ್ಚಿಗಾದರೂ ಆಗುತ್ತದೆ’ ಎಂದು ತಾಯಂದಿರು ಲೆಕ್ಕಾಚಾರ ಹಾಕಿರುತ್ತಾರೆ. ಆದ್ದರಿಂದ ವಂಚಕರ ಮೊದಲ ಟಾರ್ಗೆಟ್ ತಾಯಂದಿರು.

ಮೊದಲು ಅವರೊಂದಿಗೆ ಸ್ನೇಹ ಬೆಳೆಸಿ, ನಿಧಾನವಾಗಿ ನಂಬಿಕೆ ಗಳಿಸಿ ನಂತರ ಹಣ ಪಡೆದು ವಂಚಿಸುತ್ತಾರೆ. ಒಬ್ಬ ಮಹಿಳೆ ಒಬ್ಬರನ್ನು ನಂಬಿದರೆ ಆಕೆಯ ಸ್ನೇಹಿತರು, ನೆರೆಹೊರೆಯವರಿಗೆಲ್ಲ ಹೇಳಿ ಅವರಿಂದಲೂ ಹಣ ಹೂಡಿಕೆ ಮಾಡಿಸುತ್ತಾಳೆ ಎಂಬುದು ವಂಚಕರ ಮೂಲ ಉದ್ದೇಶಗಳಲ್ಲೊಂದು. ಕೆಲವರು ಮನೆ ಕಟ್ಟಲೆಂದು, ಮಕ್ಕಳ ಮದುವೆಗೆಂದು, ವೈದ್ಯಕೀಯ ಅವಶ್ಯಕತೆಗಳಿಗೆಂದು ಹಣ ಕೂಡಿಟ್ಟು ಇಂತಹ ಕಡೆ ಹೂಡಿಕೆ ಮಾಡಿರುತ್ತಾರೆ. ಹಣ ಮಾತ್ರವಲ್ಲದೆ ಚಿನ್ನವನ್ನೂ ಹೂಡಿಕೆ ಮಾಡಿರುತ್ತಾರೆ. ಕೊನೆಗೊಮ್ಮೆ ವಂಚಕರು ತಮ್ಮ ವರ್ಷಾನುಗಟ್ಟಲೆಯ ಸಂಪಾದನೆಯನ್ನು ಕೊಳ್ಳೆ ಹೊಡೆದು ಹೋದ ನಂತರ ತಮ್ಮ ಶ್ರಮದಿಂದ ಸಂಪಾದಿಸಿದ ಕೂಡಿಟ್ಟ ದುಡ್ಡು ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂರುತ್ತಾರೆ. ಕಳೆದುಕೊಂಡ ಹಣವನ್ನು ಮತ್ತೆ ಸಂಪಾದನೆ ಮಾಡಬಹುದು ಅಥವಾ ವಂಚಕರನ್ನು ಹಿಡಿದು ವಸೂಲಿ ಮಾಡಬಹುದು. ಆದರೆ ಆ ಸಮಯದಲ್ಲಿ ಆಗುವ ಮಾನಸಿಕ ಆಘಾತದ ಪರಿಣಾಮಗಳೇನು, ಅದನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದು ಅತ್ಯಂತ ಮುಖ್ಯ ಸಂಗತಿ.

‘ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಪ್ರತಿಯೊಂದು ಮೋಸಕ್ಕೂ ಕಾನೂನಿನ ಹೋರಾಟದಿಂದ ಜಯ ಸಿಗುತ್ತದೆ. ಕಾನೂನಿನ ಹೋರಾಟಕ್ಕೆ ಜಯವಿದ್ದರೂ ಮಾನಸಿಕ ಆಘಾತಕ್ಕೆ ಬೆಲೆ ಕಟ್ಟಲಾಗದು’ ಎನ್ನುತ್ತಾರೆ ಮಹಿಳೆೊಂಬ್ಬರು.

ಹಣ ಹೂಡಿಕೆ ಮಾಡುವ ಮುನ್ನ

  • ಆದಷ್ಟೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾತ್ರ ಹಣ ಹೂಡಿಕೆ ಮಾಡಿ
  • ಹಣ ಹೂಡಿಕೆ ಮಾಡುವ ಮುನ್ನ ಸಂಸ್ಥೆಯ ಪೂರ್ವಾಪರ ತಿಳಿದುಕೊಳ್ಳಿ
  • ನೀವು ಹೂಡಿಕೆ ಮಾಡುವ ಸಂಸ್ಥೆಗಳು ಆರ್‌ಬಿಐ, ಸಹಕಾರ ನಿಗಮದಡಿಯಲ್ಲಿ ಬರಬೇಕು
  • ಅಂಚೆ ಕಚೇರಿಯಲ್ಲಿ ಹಣ ಉಳಿತಾಯಕ್ಕೆಂದು ಇರುವ ವಿವಿಧ ೋಂಜನೆಗಳನ್ನು ಬಳಸಿಕೊಳ್ಳಿ
  • ಯಾವ ಸಂಸ್ಥೆಗಾದರೂ ಹಣ ಕಟ್ಟುತ್ತಿದ್ದರೆ ಹಣ ಪಾವತಿಸಿರುವುದಕ್ಕೆ ದಾಖಲೆ ಇರಲಿ
  • ಬಡ್ಡಿದರ ಹೆಚ್ಚಿರುವ ಒಂದೇ ಕಾರಣಕ್ಕೆ ಹೂಡಿಕೆಗೆ ಮುಂದಾಗಬೇಡಿ. ಪರಿಶೀಲಿಸಿ
  • ಎಲ್ಲಿಯೂ ಒಂದೇ ಬಾರಿ ಬೃಹತ್ ಮೊತ್ತ ಹೂಡಿಕೆ ಮಾಡಬೇಡಿ
  • ಯಾವ ಸಂಸ್ಥೆಯನ್ನೂ ಕುರುಡಾಗಿ ನಂಬಬೇಡಿ, ಬೇರೆಯವರನ್ನೂ ನಂಬಿಸಬೇಡಿ
  • ಕಡಿಮೆ ಅವಧಿಯಲ್ಲಿ ಹಣ ದ್ವಿಗುಣ ಮಾಡುತ್ತೇವೆ, ಚಿನ್ನಕ್ಕೆ ಬಡ್ಡಿ ಕೊಡುತ್ತೇವೆ ಎಂದಾಕ್ಷಣ ನಂಬಬೇಡಿ
  • ತಾವು ನಷ್ಟ ಮಾಡಿಕೊಂಡು ನಿಮಗೆ ಲಾಭ ಮಾಡಲು ಯಾರೂ ಬರುವುದಿಲ್ಲವೆಂಬುದು ತಿಳಿದಿರಲಿ

 

ಸದ್ದು ಮಾಡಿದ್ದ ಮಂಡ್ಯ ಪ್ರಕರಣ
ಕಳೆದ ವರ್ಷ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹದ್ದೇ ವಂಚನೆ ಪ್ರಕರಣವೊಂದು ನಡೆದಿತ್ತು. ವಂಚಕರಿಬ್ಬರು ೪೦ ಮಹಿಳೆಯರಿಗೆ ಬರೋಬ್ಬರಿ ೨೦ ಕೋಟಿ ರೂ. ವಂಚಿಸಿದ್ದರು. ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸೇರಿಕೊಂಡು ತಮ್ಮ ಬಳಿ ಚಿನ್ನ ಇಟ್ಟರೆ ಅಧಿಕ ಬಡ್ಡಿ ಕೊಡಿಸುತ್ತೇವೆಂದು ನಂಬಿಸಿ ಮಹಿಳೆಯರ ಬಳಿ ಚಿನ್ನ ಪಡೆದಿದ್ದರು. ಹೀಗೆ ೪೦ ಜನರ ಬಳಿ ಪಡೆದ ೨೦ ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಪಡೆದು ನಾಪತ್ತೆಯಾಗಿದ್ದರು.

***

ಕಾನೂನು ಹೋರಾಟ ಮಾಡಿ
ಸಂಸ್ಥೆಗಳು, ಸಹಕಾರ ಬ್ಯಾಂಕ್‌ಗಳಿಗಿಂತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಸಿಕ್ಕಸಿಕ್ಕ ಕಡೆ ಹಣ ಹೂಡಿಕೆ ಮಾಡಬೇಡಿ. ಇಂತಹ ಮೋಸಗಳಿಗೆ ಐಪಿಸಿ ಸೆಕ್ಷನ್ ೪೨೦, ಸಹಕಾರ ಸಂಘಗಳ ಅಧಿನಿಯಮದಡಿ (ಸಹಕಾರ ಸಂಘಗಳು, ಪತ್ತಿನ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್‌ಗಳು) ಶಿಕ್ಷೆ ಇದೆ. ಮೋಸವಾದರೆ ಕಾನೂನು ಹೋರಾಟ ಮಾಡಿ.

– ಮಂಜುಳಾ ಮಾನಸ, ಮಾಜಿ ಅಧ್ಯಕ್ಷರು, ರಾಜ್ಯ ಮಹಿಳಾ ಆಯೋಗ

***

× Chat with us