ಅನ್ನದ ಋಣ ಇರುವ ಸಿನಿಮಾ ಕಲಾವಿದರು, ಮಠಾಧಿಪತಿಗಳು ಬೀದಿಗಿಳಿಯಬೇಕು: ಬಡಗಲಪುರ ನಾಗೇಂದ್ರ

ಮೈಸೂರು: ನೂತನ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಅನ್ನದ ಋಣ ಇರುವ ಸಿನಿಮಾ ಕಲಾವಿದರು ಮತ್ತು ಮಠಾಧಿಪತಿಗಳು ಬೆಂಬಲ ಸೂಚಿಸಿ ಬೀದಿಗಿಳಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೨ ದಿನಗಳಿಂದ ರೈತರಿಂದ ನಿರಂತರ ಹೋರಾಟ ನಡೆಯುತ್ತಿದೆ. ಈವರೆಗೂ ಸಿನಿಮಾ ಕಲಾವಿದರು ರೈತರನ್ನು ಬೆಂಬಲಿಸಿ ಬೀದಿಗಿಳಿದವರು ಕಾಣುತ್ತಿಲ್ಲ. ಕಲಾವಿದರಿಗೂ ರೈತರಿಗೂ ಸಂಬಂಧವಿಲ್ಲವೇ? ಸಿನಿಮಾದಲ್ಲಿ ರೈತರ ಪರವಾದ ಡೈಲಾಗ್ ಹೊಡೆಯುತ್ತಾರೆ, ಚುನಾವಣಾ ಪ್ರಚಾರದಲ್ಲಿ ರೈತರ ಪರ ಮಾತನಾಡುತ್ತಾರೆ, ಈಗ ಅವರೆಲ್ಲ ಎಲ್ಲಿ ಹೋದರು ಎಂದು ಪ್ರಶ್ನಿಸಿದರು.

ಕೃಷಿ ಮಸೂದೆ ಸಂವಿಧಾನ ಬಾಹಿರವಾದದ್ದು ಎಂದು 78 ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಕ್ರೀಡಾಪಟುಗಳು ಸದ್ಭಾವನೆಯಿಂದ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ನಿವೃತ್ತ ೋಂಧರೂ ಕೂಡ ರೈತರ ಜೊತೆ ನಿಂತುಕೊಳ್ಳುತ್ತಿದ್ದಾರೆ. ಬೇರೆ ಬೇರೆ ದೇಶದಲ್ಲಿರುವ ಭಾರತೀಯರು ಚಳವಳಿಗೆ ಬೆಂಬಲ ನೀಡಿ ಕೇಂದ್ರ ಸರ್ಕಾರದ ನಡೆ ಖಂಡಿಸುತ್ತಿದ್ದಾರೆ. ಆದರೆ ಸಿನಿವಾ ಕಲಾವಿದರು ಒಬ್ಬರೂ ಕಾಣಿಸಿಕೊಳ್ಳುತ್ತಿಲ್ಲ, ಅವರು ಅನ್ನ ತಾನೇ ಊಟ ವಾಡೋದು? ಅನ್ನದ ಋಣ ಇರುವ ಕಲಾವಿದರು ಕೃಷಿ ಮಸೂದೆಗಳನ್ನು ವಿರೋಧಿಸಿ ಬೀದಿಗಿಳಿದು ರೈತರ ಪರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಮಠಾಧಿಪತಿಗಳು ಸುಮ್ಮನಿರುದ್ಯಾಕೆ?: ರಾಜ್ಯದಲ್ಲಿರುವ ಬಹಳಷ್ಟು ಮಠಗಳು ಶ್ರಮ ಸಂಸ್ಕೃತಿ ಮಠಗಳಾಗಿವೆ. ಮಠಗಳಲ್ಲಿ ಅನ್ನ ದಾಸೋಹ ನಡೆಸುತ್ತಿದ್ದಾರೆ. ರೈತರು ಏನೇ ಬೆಳೆದರು ಮೊದಲು ಮಠಕ್ಕೆ ನೀಡುವ ಸದ್ಭಾವನೆ ಹೊಂದಿದ್ದಾರೆ. ಹೀಗಿದ್ದರೂ ಮಠಗಳು ಸುಮ್ಮನಿರುದ್ಯಾಕೆ ಎಂದು ಪ್ರಶ್ನಿಸಿದ ಅವರು, ಜೆಎಸ್‌ಎಸ್ ಮತ್ತು ಚಿತ್ರದುರ್ಗದ ಮಠಗಳು ರೈತರ ಆತ್ಮಹತ್ಯೆ ಖಂಡಿಸಿ ರೈತರಿಗೆ ಬೆಂಬಲ ಸೂಚಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದವು. ಈಗ ದೇಶದಲ್ಲಿ ಇತಿಹಾಸ ಸೃಷ್ಟಿಯಾಗುತ್ತಿದೆ, ಈ ಚಾರಿತ್ರಿಕ ಹೋರಾಟಕ್ಕೆ ಮಠಗಳು-ಮಠಾಧೀಶರು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

× Chat with us