BREAKING NEWS

ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿಯ ಅಗತ್ಯ ಇದೆ: ಸಿದ್ದರಾಮಯ್ಯ

ಬೆಂಗಳೂರು: ʼಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹ ನಿರ್ಧಾರವಾಗಿದ್ದರೂ ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳ ಮೀಸಲಾತಿ ನೀಡದೆ ಇದ್ದರೆ ಈ ಸಮುದಾಯದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗುವುದು ಮಾತ್ರವಲ್ಲ ಮೀಸಲಾತಿಯ ಉದ್ದೇಶವೇ ವಿಫಲವಾಗಲಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ʼʼಲಿಂಗ ಅಸಮಾನತೆಯ ಜೊತೆಯಲ್ಲಿ ಜಾತಿ ಅಸಮಾನತೆಯನ್ನೂ ಒಳಗೊಂಡಿರುವ ಭಾರತೀಯ ಸಮಾಜದಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದ ಮಹಿಳೆಯರು ರಾಜಕೀಯವಾಗಿ ಉಳಿದವರ ಜೊತೆ ಪೈಪೋಟಿ ನಡೆಸಿ ಪ್ರಾತಿನಿಧ್ಯ ಪಡೆಯುವಂತಹ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಾಮರ್ಥ್ಯ ಇಲ್ಲದಿರುವುದನ್ನು ನಾವು ಗಮನಿಸಬೇಕಾಗಿದೆʼʼ ಎಂದು ಹೇಳಿದ್ದಾರೆ.

ʼʼಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಾಗಲೇ ರಾಜಕೀಯ ಮೀಸಲಾತಿ ಇರುವುದರಿಂದ ಆ ಸಮುದಾಯಗಳ ಮಹಿಳೆಯರಿಗೆ ಮೀಸಲಾತಿ ನೀಡುವುದು ಸಮಸ್ಯೆಯಾಗಲಾರದು. ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿಯ ಮಸೂದೆಯನ್ನು ವಿವರವಾಗಿ ಪರಿಶೀಲಿಸಿದರೆ ಮಹಿಳೆಯರಿಗೆ ರಾಜಕೀಯ ನ್ಯಾಯಕೊಡಿಸುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಲಾಭ ಪಡೆಯುವ ಸ್ವಾರ್ಥವೇ ಕಾಣುತ್ತಿದೆ. ಈಗಿನ ಮಸೂದೆಯನ್ನು ಇದೇ ರೂಪದಲ್ಲಿ ಜಾರಿಗೆ ತರಲು ಹೊರಟರೆ ಮಹಿಳೆಯರು ರಾಜಕೀಯ ಮೀಸಲಾತಿ ಪಡೆಯಲು ಇನ್ನೆರಡು ದಶಕಗಳ ಕಾಲ ಕಾಯಬೇಕಾಗಬಹುದುʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ʼʼಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಬೇಕೆಂಬ ಪ್ರಾಮಾಣಿಕ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದರೆ 2010ರಲ್ಲಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರಾಜ್ಯ ಸಭೆಯಲ್ಲಿ ಅಂಗೀಕಾರ ಪಡೆದಿರುವ ಮಸೂದೆಯನ್ನೇ ಲೋಕಸಭೆಯಲ್ಲಿ ಮಂಡಿಸಬೇಕಾಗಿತ್ತು. 2010ರಲ್ಲಿ ಮಸೂದೆಗೆ ರಾಜ್ಯಸಭೆ ನೀಡಿರುವ ಅಂಗೀಕಾರ ಇನ್ನೂ ಚಾಲ್ತಿಯಲ್ಲಿರುವ ಕಾರಣ ಲೋಕಸಭೆಯಲ್ಲಿ ಅಂಗೀಕಾರ ಪಡೆದ ಕೂಡಲೇ ಮಸೂದೆ ಕಾಯ್ದೆಯಾಗಿ ರೂಪುಗೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುತ್ತಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ಮಸೂದೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿರುವುದರಿಂದ ಅದನ್ನು ಮತ್ತೆ ರಾಜ್ಯಸಭೆಯಲ್ಲಿ ಮಂಡಿಸಬೇಕಾಗಿದೆʼʼ ಎಂದು ಆಗ್ರಹಿಸಿದ್ದಾರೆ.

ʼʼಮುಂದಿನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡೆದ ನಂತರವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಮಸೂದೆಯಲ್ಲಿಯೇ ಹೇಳಿರುವುದರಿಂದ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕನಿಷ್ಠ 20 ವರ್ಷ ಬೇಕಾಗಬಹುದು. ಮುಂದಿನ ಜನಗಣತಿ 2026ರಲ್ಲಿ ಮತ್ತು ಕ್ಷೇತ್ರ ಮರುವಿಂಗಡಣೆ 2031ರಲ್ಲಿ ನಡೆಯುವ ಸಾಧ್ಯತೆ ಇದೆʼʼ ಎಂದು ಹೇಳಿದ್ದಾರೆ.

ʼʼಮಹಿಳೆಯರಿಗೆ ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ ನೀಡುವ ಮಸೂದೆ ಮೂಲತ: ಕಾಂಗ್ರೆಸ್ ಪಕ್ಷದ ಕನಸಿನ ಕೂಸು. ಈ ಕನಸನ್ನು ನನಸು ಮಾಡಲು ಪ್ರಾಮಾಣಿಕವಾದ ಪ್ರಯತ್ನ ಮಾಡಿದವರು ನಮ್ಮ ಹೆಮ್ಮೆಯ ನಾಯಕರಾದ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಎನ್ನುವುದನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳಬೇಕಾಗಿದೆʼʼ ಎಂದು ಅವರು ಹೇಳಿದ್ದಾರೆ.

ʼʼನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ರಾಜಕೀಯ ಮೀಸಲಾತಿ ನೀಡುವ ಮಸೂದೆಯನ್ನು ಮೊದಲ ಬಾರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1989ರಲ್ಲಿಯೇ ಲೋಕಸಭೆಯಲ್ಲಿ ಮಂಡಿಸಿದ್ದರು. ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಸ್ಥಾನಗಳಲ್ಲಿ ಶೇಕಡಾ 33ರಷ್ಟನ್ನು ಮಹಿಳೆಯರಿಗೆ ಮೀಸಲಾತಿ ನೀಡುವ ಐತಿಹಾಸಿಕ ಮಸೂದೆ 1993ರಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಕಾಲದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆಗೊಂಡು ಅನುಷ್ಠಾನಗೊಂಡಿದೆ. ಈ ಕ್ರಾಂತಿಕಾರಿ ಬದಲಾವಣೆಗೆ ಕಾಂಗ್ರೆಸ್ ಪಕ್ಷ ಕಾರಣ ಎನ್ನುವುದು ಕೂಡಾ ಇತಿಹಾಸದ ಪುಟದಲ್ಲಿ ದಾಖಲಾಗಿದೆʼʼ ಎಂದರು.

ʼʼ2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಮಹಿಳಾ ಮೀಸಲಾತಿಯನ್ನೂ ಸೇರಿಸಿಕೊಂಡಿತ್ತು. 2010ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದ ಕಾಂಗ್ರೆಸ್ ಸರ್ಕಾರ ಅದಕ್ಕೆ ಅಂಗೀಕಾರ ಪಡೆಯಲು ಯಶಸ್ವಿಯಾಗಿತ್ತು. ಸಂಸತ್ ಮತ್ತು ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕಾಯ್ದೆಯನ್ನು ಜಾರಿಗೆ ತರುವಂತೆ ಕಾಂಗ್ರೆಸ್ ಪಕ್ಷ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಬಂದಿದೆ.

ರಾಜಕೀಯ ಭಿನ್ನಮತಗಳನ್ನು ಮೀರಿ ಮಹಿಳಾ ಮೀಸಲಾತಿ ಮಸೂದೆ ಸಂಸತ್ ನಲ್ಲಿ ಅಂಗೀಕಾರವಾಗುವಂತೆ ಪ್ರಯತ್ನ ಮಾಡಿ ಎಂದು 2018ರಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಲೋಕಸಭೆಯಲ್ಲಿಯೇ ಮನವಿ ಮಾಡಿದ್ದರುʼʼ ಎಂದು ವಿವರಿಸಿದ್ದಾರೆ.

ʼʼ2019ರ ಲೋಕಸಭಾ ಚುನಾವಣೆಯ ಕಾಲದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಮಹಿಳೆಯರ ರಾಜಕೀಯ ಮೀಸಲಾತಿಯನ್ನು ಸೇರಿಸಲಾಗಿದ್ದು ಅದಕ್ಕೆ ನಾವು ಸದಾ ಬದ್ದರಾಗಿದ್ದೇವೆ. ಮಹಿಳಾ ಮೀಸಲಾತಿ ವಿಧೇಯಕದ ವಿಚಾರದಲ್ಲಿ ಬಿಜೆಪಿ ಆಡಳಿತವಿರುವ, ದೇಶದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಯೋಗಿ ಆದಿತ್ಯನಾಥ್‌ ಅವರ ಅಭಿಪ್ರಾಯವೇನಿತ್ತು ಎನ್ನುವುದು ಇಡೀ ದೇಶಕ್ಕೇ ಗೊತ್ತಿರುವ ವಿಚಾರವಾಗಿದೆ.

ಸಂಸದರಾಗಿದ್ದ ವೇಳೆ ಆದಿತ್ಯನಾತ್‌ ಅವರು ಈ ವಿಚಾರವಾಗಿ ಅಭಿಪ್ರಾಯಭೇದ ವ್ಯಕ್ತಪಡಿಸಿದ್ದರು. ಮೊದಲು ಈ ವಿಷಯದಲ್ಲಿ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆಯಾಗಿ ಸಹಮತ ಮೂಡಬೇಕು ಎಂದಿದ್ದರು. “ಕಾಂಗ್ರೆಸ್‌ ನ ಪಾಪವನ್ನು ನಾವೇಕೆ ತಲೆಯ ಮೇಲೆ ಹೊರಬೇಕು” ಎಂದು ಹೀಗಳೆದಿದ್ದರು. ಈಗಲೂ ಅವರ ಅಭಿಪ್ರಾಯ ಇದೇ ಇದೆಯೋ ಅಥವಾ ಬದಲಾಗಿದೆಯೋ ಎಂದು ಈ ವೇಳೆ ಕೇಳಬಯಸುತ್ತೇನೆʼʼ ಎಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

andolanait

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

54 mins ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

3 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

4 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

4 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

7 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

8 hours ago