ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರತಿವರ್ಷ ನಡೆಯುವ ನುಡಿಹಬ್ಬದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪದವಿಯನ್ನು ನೀಡಿ ಗೌರವಿಸುತ್ತಾ ಬಂದಿತ್ತು. ಈ ನಿಟ್ಟಿನಲ್ಲಿ ಹಲವಾರು ಸಾಧಕರು ನಾಡೋಜ ಪದವಿಗೆ ಪಾತ್ರವಾಗಿದ್ದರು. ಆದರೀಗ ಹೆಸರಿನ ಮುಂದೆ ನಾಡೋಜ ಪದವಿಯನ್ನು ಬಳಸಬಾರದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಬಗ್ಗೆ ಹಲವಾರು ಸಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ನಿರ್ಧಾರವನ್ನು ವಾಪಸ್ ಪಡೆಯದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ನಾಡೋಜ ಪ್ರಶಸ್ತಿಗೆ ಭಾಜನವಾಗಿರುವ ಮಹೇಶ್ ಜೋಷಿ ಅವರು ನಾಡೋಜ ಪದ ಬಳಕೆಯ ಬಗ್ಗೆ ಪತ್ರ ಬರೆದು ವಿವರಣೆಯನ್ನು ಕೇಳಿದ ಹಿನ್ನೆಲೆಯಲ್ಲಿ ಚರ್ಚೆ ನಡೆದು ಈ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಸ್ಪಷ್ಟನೆ ಪಡೆದುಕೊಳ್ಳಲು ಕುಲಪತಿ ಡಾ.ಸ.ಚಿ ರಮೇಶ ಅವರಿಗೆ ಕರೆ ಮಾಡಿದರು ಸಹ ಸರಿಯಾದ ಪ್ರತಿಕ್ರಿಯೆ ನೀಡದಿರುವುದು ತಿಳಿದುಬಂದಿದೆ.