ಮೈವಿವಿ ಪ್ರಾಧ್ಯಾಪಕನ ವಿರುದ್ಧ ಅತ್ಯಾಚಾರ ಆರೋಪ: ಪತ್ನಿಯಿಂದಲೇ ದೂರು, ಅತ್ಯಾಚಾರ ನಡೆದಿಲ್ಲ ಎಂದ ಸಂಶೋಧನಾ ವಿದ್ಯಾರ್ಥಿನಿ!

ಮೈಸೂರು: ನನ್ನ ಪತಿಯು ಪಿಹೆಚ್‌ಡಿ ಸಂಶೋಧನೆ ಮಾಡುತ್ತಿದ್ದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪತ್ನಿ ದೂರಿದರೆ, ಪತಿ-ಪತ್ನಿಯ ಜಗಳದಲ್ಲಿ ನನ್ನನ್ನು ಎಳೆತರಲಾಗಿದೆ. ನನ್ನ ಮೇಲೆ ಯಾರೂ ಅತ್ಯಾಚಾರ ನಡೆಸಿಲ್ಲ ಎಂದು ಯುವತಿ ಹೇಳಿಕೆ ನೀಡಿರುವ ವಿಚಿತ್ರ ಪ್ರಸಂಗ ನಗರದಲ್ಲಿ ನಡೆದಿದೆ.

ನಗರದ ಮೈಸೂರು ವಿವಿ ಪ್ರಾಧ್ಯಾಪಕರೊಬ್ಬರ ಮೇಲೆ ಆಕೆಯ ಪತ್ನಿಯೇ ಅತ್ಯಾಚಾರ ಅರೋಪ ಹೊರಿಸಿದ್ದು, ಇದೀಗ ಪ್ರಕರಣವು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯ ಮೆಟ್ಟಲೇರಿದೆ. ಘಟನೆಯ ಬಗ್ಗೆ ಸ್ಪಷ್ಟತೆ ಇಲ್ಲದೆ ಪೊಲಿಸರೇ ಗೊಂದಲಕ್ಕೊಳಗಾಗಿದ್ದಾರೆ.

ನಡೆದದ್ದೇನು?: ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಾಧ್ಯಾಪಕರ ಪತ್ನಿ, ಗುರುವಾರ ಮಧ್ಯಾಹ್ನ ನಾನು ಸ್ಟಡಿ ಮೆಟೀರಿಯಲ್ ತರಲೆಂದು ಮನೆಗೆ ತೆರಳಿದ್ದೆ. ಈ ವೇಳೆ ಮನೆಯಲ್ಲಿ ಯುವತಿಯ ಚೀರಾಟ ಕೇಳಿಬಂತು. ನಾನು ಕೂಡಲೇ ಮನೆಯ ಒಳಗೆ ತೆರಳಿದಾಗ ಓಡಿ ಬಂದ ಯುವತಿಯು ನನ್ನ ಕಾಲನ್ನು ಹಿಡಿದು ಕಾಪಾಡುವಂತೆ ಬೇಡಿಕೊಂಡಳು.
ನಿಮ್ಮ ಪತಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದಳು. ಕೂಡಲೇ ಅಕೆಯನ್ನು ಸಂತೈಸಿದ ನಾನು ಆಕೆಯಿಂದ ದೂರು ಪತ್ರ ಬರೆಸಿ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಕರೆದೊಯ್ದೆ. ನನ್ನ ಪತಿ ವಿರುದ್ಧ ಈ ಹಿಂದೆ ಕೂಡ ಇಂತಹುದೇ ದೂರು ಬಂದಿತ್ತು. ಆದರೆ, ತೊಂದರೆಗೊಳಗಾದವರು ಮುಂದೆ ಬರದ ಕಾರಣ ಸುಮ್ಮನಾಗಿದ್ದೆ ಎಂದು ಹೇಳಿದ್ದಾರೆ.

ಈ ಸಂಬಂಧ ಪೊಲೀಸರು ಠಾಣೆಗೆ ಪ್ರಾಧ್ಯಾಪಕರನ್ನು ಕರೆಸಿದ್ದಾರೆ. ಪೊಲೀಸರು ಹೇಳುವಂತೆ ಯಾವುದೇ ಅತ್ಯಾಚಾರ ನಡೆದಿಲ್ಲ. ಇದನ್ನು ಯುವತಿಯೇ ಹೇಳಿದ್ದಾಳೆ. ಪತಿ, ಪತ್ನಿಯರ ಜಗಳದಲ್ಲಿ ವಿನಾಕಾರಣ ನನ್ನನ್ನು ಬಳಸಿಕೊಳ್ಳಲಾಗಿದೆ. ದೂರು ಪತ್ರಕ್ಕೆ ಬಲವಂತವಾಗಿ ನನ್ನ ಹೆಬ್ಬೆಟ್ಟನ್ನು ಒತ್ತಿಸಲಾಗಿದೆ. ಸಹಿ ಮಾಡದಷ್ಟು ನಾನು ಅನಕ್ಷರಸ್ಥೆಯೇ? ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರಾಧ್ಯಾಪಕರ ಪತ್ನಿಯು, ತನ್ನ ಪತಿಯ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ. ಯುವತಿ ಕೂಡ ದೂರು ಕೊಡಲು ನಿರಾಕರಿಸುತ್ತಿದ್ದಾಳೆ ಎಂದು ಹೇಳಿದ್ದಾರೆ. ಹೀಗಾಗಿ ರಾತ್ರಿ ೧೦ ಗಂಟೆಯಾದರೂ ಕೂಡ ಪ್ರಕರಣದ ಬಗ್ಗೆ ಸ್ಪಷ್ಟತೆ ಕಂಡುಬಂದಿರಲಿಲ್ಲ.

ʻಪ್ರಾಧ್ಯಾಪಕರ ಮೇಲೆ ಅತ್ಯಾಚಾರ ಆರೋಪ ಹೊರಿಸಿರುವ ಕುರಿತು ಠಾಣೆಗೆ ಕೆಲವರು ಬಂದಿದ್ದಾರೆ. ಈವರೆಗೂ ಯಾವುದೇ ದೂರು ಬಂದಿಲ್ಲ. ದೂರು ಬಂದರೆ ಎಫ್‌ಐಆರ್ ದಾಖಲಿಸುತ್ತೇವೆʼ.

-ಪ್ರದೀಪ್ ಗುಂಟಿ, ಡಿಸಿಪಿ, ಮೈಸೂರು

× Chat with us