ಮೋದಿ-ಕಮಲಾ ಭೇಟಿ: ಭಯೋತ್ಪಾದನೆಗೆ ಪಾಕ್ ಕುಮ್ಮಕ್ಕು ವಿಷಯ ಗಹನ ಚರ್ಚೆ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಷಿಂಗ್ಟನ್‌ನಲ್ಲಿ ಶುಕ್ರವಾರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿ ಭಯೋತ್ಪಾದನೆ ನಿಗ್ರಹ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.

ಕಮಲಾ ಹ್ಯಾರಿಸ್ ಅವರು ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ನೇರವಾಗಿ ಮತ್ತು ಸ್ವಯಂಪ್ರೇರಿತವಾಗಿ ಪ್ರಸ್ತಾಪಿಸಿ ಗಮನಸೆಳೆದರು. ಉಗ್ರವಾದಕ್ಕೆ ಪಾಕ್ ನೀಡುತ್ತಿರುವ ಬೆಂಬಲ ಬಗ್ಗೆ ಸೂಕ್ಷ್ಮವಾಗಿ ಪರಿಸ್ಥಿತಿ ಮತ್ತು ಆಗುಹೋಗುಗಳನ್ನು ಗಮನಿಸಬೇಕು ಎಂದು ಮೋದಿ ಭೇಟಿ ಸಂದರ್ಭದಲ್ಲಿ ಆದ ಮಾತುಕತೆ ವೇಳೆ ಅಮೆರಿಕ ಉಪಾಧ್ಯಕ್ಷರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷ ಶೃಂಗ್ಲ, ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಗುಂಪುಗಳು ಸಕ್ರಿಯವಾಗಿವೆ ಎಂಬುದನ್ನು ಒಪ್ಪಿಕೊಂಡ ಕಮಲಾ ಹ್ಯಾರಿಸ್ ಅವರು ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳಿಗೆ ಪಾಕಿಸ್ತಾನ ಬೆಂಬಲ, ಸಹಕಾರ ನೀಡುತ್ತಿರುವ ವಿಷಯದ ಬಗ್ಗೆಯೂ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಕಮಲಾ ಹ್ಯಾರಿಸ್ ಒತ್ತಾಯಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ ಸಿಲುಕಿ ಹಲವು ದಶಕಗಳಿಂದ ಹೇಗೆ ತೊಂದರೆ ಅನುಭವಿಸುತ್ತಿದೆ ಎಂಬುದನ್ನು ಪ್ರಧಾನಿ ಮೋದಿಯವರು ಕಮಲಾ ಹ್ಯಾರಿಸ್ ಅವರಿಗೆ ಮನವರಿಕೆ ಮಾಡಿದರು. ಇಂತಹ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ಹೇಗೆ ಬೆಂಬಲ ನೀಡುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರಬೇಕು ಎಂಬುದನ್ನು ಕಮಲಾ ಹ್ಯಾರಿಸ್ ಪ್ರಸ್ತಾಪಿಸಿದರು.

ಭಾರತ ಸರ್ಕಾರವು ಮಾರಕ ಕೊರೊನಾ ನಿರ್ವಹಣೆಯಲ್ಲಿ ಕೈಗೊಂಡಿರುವ ಕ್ರಮಗಳು ಮತ್ತು ಬೃಹತ್ ಲಸಿಕೆ ಅಭಿಯಾನವನ್ನು ಕಮಲಾ ಹ್ಯಾರಿಸ್ ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

× Chat with us