ಜಾತಕದಲ್ಲಿನ ದೋಷ ವಿಚ್ಛೇದನಕ್ಕೆ ಕಾರಣವಲ್ಲ: ಬಾಂಬೆ ಹೈಕೋರ್ಟ್‌

ಮುಂಬೈ: ಜಾತಕದಲ್ಲಿನ ದೋಷವು ವಿಚ್ಛೇದನ ನೀಡಲು ಕಾರಣವಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್‌ಪುರ ಪೀಠ ಆದೇಶ ನೀಡಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿದ್ದು, ಜಾತಕದಲ್ಲಿನ ದೋಷವನ್ನು ಪರಿಗಣಿಸಿ ವಿವಾಹ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.

ಪತ್ನಿ ಬಗ್ಗೆ ಆರೋಪಿಸಿರುವ ವ್ಯಕ್ತಿಯು ತನ್ನ ಪತ್ನಿಯ ಹುಟ್ಟಿದ ದಿನಾಂಕವನ್ನು ಆಕೆಯ ಪೋಷಕರು ತಪ್ಪಾಗಿ ನೀಡಿದ್ದಾರೆ. ಇದರಿಂದಾಗಿ ಜಾತಕ ಫಲ ಚೆನ್ನಾಗಿ ಕೂಡಿಬಂತು. ಆಕೆಯ ನಿಜವಾದ ಜನ್ಮ ದಿನಾಂಕವನ್ನು ನೋಡಿದಾಗ ಆಕೆಯ ಜಾತಕದಲ್ಲಿ ದೋಷ ಇರುವುದು ಕಂಡುಬಂದಿದೆ. ಹಾಗಾಗಿ ಆಕೆಯಿಂದ ತನಗೆ ವಿಚ್ಛೇದನ ನೀಡಬೇಕು ಎಂದು ವ್ಯಕ್ತಿಯು ಕೋರ್ಟ್‌ ಮೆಟ್ಟಿಲೇರಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎ.ಎಸ್‌. ಚಂದ್ರಶೇಖರ್‌ ಹಾಗೂ ಎನ್‌ಬಿ ಸುರ್ಯವಂಶಿ ಅವರನ್ನೊಳಗೊಂಡ ಪೀಠವು ಆಕೆಯ ಪೋಷಕರು ತಪ್ಪು ದಿನಾಂಕ ನೀಡಿರಲಿ ಅಥವಾ ಸುಳ್ಳು ದಿನಾಂಕ ನೀಡಿರಲಿ. ಜಾತಕವು ವೈವಾಹಿಕ ಜೀವನದ ಮುಖ್ಯ ಅಂಶವಲ್ಲ. ಹಾಗಾಗಿ ಈ ಕಾರಣಕ್ಕೆ ವಿಚ್ಛೇದನ ನೀಡುವುದು ಅಸಾಧ್ಯ ಎಂದು ಹೇಳಿದೆ.

× Chat with us