ಹನೂರು: ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ

ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ ಮೇಲೆ ರೋಗಿಯೊಬ್ಬರ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಕಾರ್ಯ ನಿರ್ವಹಿಸುತ್ತಿರುವ ಸಂತೋಷ್ ಹಾಗೂ ಸ್ಟಾಫ್ ನರ್ಸ್ ಉಮಾದೇವಿ ಅವರ ಮೇಲೆ ಹಲ್ಲೆಗೊಳಗಾದವರು.

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ಊರುಬಸಪ್ಪ ಒಡ್ಡಿನ ನಿವಾಸಿ ಚಿಕ್ಕಣ್ಣ ಅವರನ್ನು ಶುಕ್ರವಾರ (ಮೇ 7) ಮಧ್ಯಾಹ್ನ 1.30ಕ್ಕೆ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಬಿ.ಪಿ., ಪಲ್ಸ್ ಎಲ್ಲವನ್ನು ಪರೀಕ್ಷಿಸಿದ ಸಿಬ್ಬಂದಿ ಕುಟುಂಬದವರ ಸಮ್ಮಿತಿಯ ಮೇರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲಕ್ಕೆ ಕರೆದೊಯ್ಯುವಂತೆ ಹೇಳಿದ್ದಾರೆ. ಖಾಸಗಿ ವಾಹನದಲ್ಲಿ ರೋಗಿಯನ್ನು ಕರೆದೊಯ್ಯುವ ವೇಳೆ ಬಾಯಿಂದ ನೊರೆ ಬಂದಿದೆ. ತಕ್ಷಣ ವಾಪಸ್ ಬಂದ ರೋಗಿಯ ಸಂಬಂಧಿಕರು ನಮ್ಮ ತಂದೆಗೆ ಏನಾದರೂ ಹೆಚ್ಚು ಕಡಿಮೆಯಾದರೆ ನೀವೇ ಕಾರಣ ಎಂದು ಹೇಳಿ ಸ್ಟಾಫ್ ನರ್ಸ್ ಉಮಾದೇವಿ ಹಾಗೂ ಕೋವಿಡ್ ಲಸಿಕೆ ನೀಡುವ ಕರ್ತವ್ಯದಲ್ಲಿದ್ದ ಸುರೇಶ್ ಅವರ ಮೇಲೆ ಹಿಗ್ಗಾಮಗ್ಗ ಹಲ್ಲೆ ನಡೆಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಆಂಬ್ಯುಲೆನ್ಸ್ ಇಲ್ಲದೇ ರೋಸಿ ಹೋದ ರೋಗಿಯ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಸಂಬಂಧ ಆರೋಗ್ಯ ಇಲಾಖೆಯ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೂಕ್ತ ರಕ್ಷಣೆ ನೀಡಿಲ್ಲ. ಏನಾದರೂ ಸಿಬ್ಬಂದಿಗಳ ಪ್ರಾಣಹಾನಿಯಾದರೆ ಯಾರು ಹೊಣೆ ಎಂದು ಎಂದು ಮಹದೇಶ್ವರ ಬೆಟ್ಟದ ನಿವಾಸಿಯೊಬ್ಬರು ಪ್ರಶ್ನಿಸಿದ್ದಾರೆ.

× Chat with us